ADVERTISEMENT

‘ಕಾಂಗ್ರೆಸ್‌ ನಾಯಕತ್ವ ಒಬ್ಬ ವ್ಯಕ್ತಿಯ ಹಕ್ಕಲ್ಲ’– ಪ್ರಶಾಂತ್‌ ಕಿಶೋರ್‌ ಟೀಕೆ

ರಾಹುಲ್‌ ಗಾಂಧಿಯನ್ನು ಟೀಕಿಸಿದ ಪ್ರಶಾಂತ್‌ ಕಿಶೋರ್‌: ಕಾಂಗ್ರೆಸ್‌ ತಿರುಗೇಟು

ಪಿಟಿಐ
Published 2 ಡಿಸೆಂಬರ್ 2021, 19:38 IST
Last Updated 2 ಡಿಸೆಂಬರ್ 2021, 19:38 IST
ಪ್ರಶಾಂತ್‌ ಕಿಶೋರ್‌
ಪ್ರಶಾಂತ್‌ ಕಿಶೋರ್‌   

ನವದೆಹಲಿ/ಕೋಲ್ಕತ್ತ: ಕಾಂಗ್ರೆಸ್‌ ಪಕ್ಷದ ನಾಯಕತ್ವವು ಒಬ್ಬ ವ್ಯಕ್ತಿಯ ದೈವಿಕ ಹಕ್ಕು ಏನಲ್ಲ. ವಿಶೇಷವಾಗಿ, ಕಳೆದ ಹತ್ತು ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷವು ಸ್ಪರ್ಧಿಸಿದ್ದ ಚುನಾವಣೆಗಳ ಪೈಕಿ ಶೇ 90ರಷ್ಟರಲ್ಲಿ ಸೋತಿದೆ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ. ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರನ್ನು ಗುರಿಯಾಗಿಸಿ ಅವರು ಗುರುವಾರ ಈ ಹೇಳಿಕೆ ನೀಡಿದ್ದಾರೆ.

ಈಗ ಯುಪಿಎ ಎಂಬುದೇ ಇಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಹೇಳಿದ್ದರು. ಮಮತಾ ಅವರ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ (ಟಿಎಂಸಿ) ಕಿಶೋರ್‌ ಅವರು ಚುನಾವಣಾ ಕಾರ್ಯತಂತ್ರ ಸಲಹೆಗಾರ.ವಿಪಕ್ಷದ ನಾಯಕರನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಬೇಕು ಎಂದೂ ಕಿಶೋರ್‌ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷವು ಈ ಹೇಳಿಕೆಗೆ ತಿರುಗೇಟು ನೀಡಿದೆ. ‘ಇಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿರುವ ವ್ಯಕ್ತಿಯು (ರಾಹುಲ್‌) ಭಾರತದ ಪ್ರಜಾಪ್ರಭುತ್ವವನ್ನು ಆರ್‌ಎಸ್‌ಎಸ್‌ನಿಂದ ರಕ್ಷಿಸಲು ತಮ್ಮ ದೈವಿಕ ಕರ್ತವ್ಯ ನಿರ್ವಹಿಸಲು ಹೋರಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ಪವನ್‌ ಖೇರ ಹೇಳಿದ್ದಾರೆ.

ADVERTISEMENT

‘ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ವೃತ್ತಿಪರ ವ್ಯಕ್ತಿಗೆ, ಪಕ್ಷಗಳು ಅಥವಾ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಲಹೆ ನೀಡುವ ಸ್ವಾತಂತ್ರ್ಯ ಇದೆ. ಆದರೆ, ನಮ್ಮ ರಾಜಕೀಯದ ಕಾರ್ಯಸೂಚಿಯನ್ನು ಅವರು ರೂಪಿಸಲು ಆಗದು’ ಎಂದೂ ಖೇರ ಹೇಳಿದ್ದಾರೆ.

‘ಆಳುವ ದೈವಿಕ ಹಕ್ಕು ತನಗೆ ಇದೆ ಎಂದು ಕಾಂಗ್ರೆಸ್‌ ಭಾವಿಸಿದೆ ಎಂಬ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಬೇಕಿದೆ. ಹೋರಾಟದ ದೈವಿಕ ಕರ್ತವ್ಯದ ಶ್ರೀಮಂತ ಪರಂಪರೆಯನ್ನುರಾಹುಲ್ ಗಾಂಧಿ ಮುಂದಕ್ಕೆ ಒಯ್ಯುತ್ತಿದ್ದಾರೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ.

‘ಯುಪಿಎಯ ಭಾಗವಾಗಿಲ್ಲದ, ಪ್ರಾದೇಶಿಕ ಪಕ್ಷದ ನಾಯಕಿಯೊಬ್ಬರು ಯುಪಿಎ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಹೇಳಿರುವುದು ವಿಚಿತ್ರವಾಗಿದೆ. ನಾನು ಅಮೆರಿಕದ ಪ್ರಜೆ ಅಲ್ಲ. ಹಾಗಂತ ಅಮೆರಿಕವೇ ಇಲ್ಲ ಎಂದು ಹೇಳಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ನೆಲೆಯನ್ನು ರಾಷ್ಟ್ರ ಮಟ್ಟದಲ್ಲಿ ವಿಸ್ತರಿಸಲು ಪ್ರಶಾಂತ್‌ ಕಿಶೋರ್‌ ಅವರು ಪ್ರಯತ್ನಿಸುತ್ತಿದ್ದಾರೆ. ಸಂಸತ್ತಿನಲ್ಲಿ ಸರ್ಕಾರವನ್ನು ಎದುರಿಸುವ ವಿಚಾರದಲ್ಲಿ ಕಾಂಗ್ರೆಸ್‌ ನಾಯಕತ್ವದ ಪಕ್ಷಗಳ ಗುಂಪಿನಿಂದ ದೂರವೇ ಉಳಿ
ಯುವ ನಿರ್ಧಾರವನ್ನು ಟಿಎಂಸಿ ತೆಗೆದುಕೊಂಡಿದೆ. ಜತೆಗೆ, ಬಿಜೆಪಿಯನ್ನು ಎದುರಿಸುವ ಸಾಮರ್ಥ್ಯ ಕಾಂಗ್ರೆಸ್‌ಗೆ ಇಲ್ಲ ಎಂದು ಟಿಎಂಸಿ ಹೇಳುತ್ತಿದೆ.

ಕಿಶೋರ್‌ ಅವರು ಕಾಂಗ್ರೆಸ್‌ ನಾಯಕರ ಜತೆಗೆ ಕೆಲವು ತಿಂಗಳ ಹಿಂದೆ ಮಾತುಕತೆ ನಡೆಸಿದ್ದರು. ರಾಹುಲ್‌ ಗಾಂಧಿ ಅವರನ್ನೂ ಭೇಟಿಯಾಗಿದ್ದರು. ಅವರು ಕಾಂಗ್ರೆಸ್ ಸೇರುವ ಬಗ್ಗೆ ಗಂಭೀರ ಚರ್ಚೆಗಳು ನಡೆದಿದ್ದವು. ಆದರೆ, ಅದು ಕೈಗೂಡಲಿಲ್ಲ. ಕಾಂಗ್ರೆಸ್‌ ಪಕ್ಷದ ಹಲವು ಮುಖಂಡರು ಟಿಎಂಸಿಗೆ ಇತ್ತೀಚೆಗೆ ಸೇರ್ಪಡೆಯಾಗಿದ್ದಾರೆ. ಮೇಘಾಲಯದ 17 ಕಾಂಗ್ರೆಸ್‌ ಶಾಸಕರ ಪೈಕಿ 12 ಮಂದಿ ಟಿಎಂಸಿಗೆ ಕಳೆದ ವಾರ ಸೇರಿದ್ದರು.

ಕೆಲವು ವಾರಗಳ ಹಿಂದೆಯೂ ಕಿಶೋರ್, ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ್ದರು. ಲಖಿಂಪುರ–ಖೇರಿಯಲ್ಲಿ ರೈತರ ಹತ್ಯೆ ಪ್ರಕರಣವನ್ನು ಇರಿಸಿಕೊಂಡು ಕಾಂ‌ಗ್ರೆಸ್‌ ಪಕ್ಷವು ಪುನಶ್ಚೇತನಗೊಳ್ಳಬಹುದು ಎಂದು ಕೆಲವರು ಭಾವಿಸಿದ್ದಾರೆ. ಅವರಿಗೆಲ್ಲ ನಿರಾಶೆ ಆಗಲಿದೆ. ಆಳವಾಗಿ ಬೇರು ಬಿಟ್ಟಿರುವ ಸಮಸ್ಯೆಗಳಿಗೆ ತ್ವರಿತವಾದ ಪರಿಹಾರವಿಲ್ಲ ಎಂದಿದ್ದರು.

* ವಿರೋಧ ಪಕ್ಷಗಳು ಒಗ್ಗಟ್ಟಾಗಬೇಕು. ಕಾಂಗ್ರೆಸ್‌ ಇಲ್ಲದ ಯುಪಿಎ ಎಂಬುದು ಆತ್ಮವಿಲ್ಲದ ದೇಹದಂತೆ.

–ಕಪಿಲ್‌ ಸಿಬಲ್‌, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.