
ಕಾಂಗ್ರೆಸ್
ನವದೆಹಲಿ (ಪಿಟಿಐ): ‘ಮತಕಳ್ಳರೇ, ಅಧಿಕಾರದ ಗದ್ದುಗೆ ಬಿಡಿ’ ಎಂಬ ಘೋಷಣೆಯೊಂದಿಗೆ ಬಿಜೆಪಿ ವಿರುದ್ಧ ಆರಂಭವಾದ ಅಭಿಯಾನವು ಇದೇ ನವೆಂಬರ್ 8ಕ್ಕೆ ಮೊದಲ ವರ್ಷ ತುಂಬಲಿದ್ದು, ದೇಶದಾದ್ಯಂತ ರಾಜ್ಯದ ಕೇಂದ್ರ ಕಚೇರಿಗಳಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಗುರುವಾರ
ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, ‘ಚುನಾವಣಾ ಆಯೋಗದ ಜೊತೆ ಸೇರಿಕೊಂಡು ಬಿಜೆಪಿಯು ನಡೆಸಿದ ಮತಕಳವಿನ ವಿರುದ್ಧ ವ್ಯಕ್ತ
ವಾದ ಜನಾಕ್ರೋಶ ಹಾಗೂ ಅಸಮಾಧಾನದ ಕುರಿತಂತೆ ದೇಶ
ದಾದ್ಯಂತ 5 ಕೋಟಿ ಜನರಿಂದ ಸಹಿ ಸಂಗ್ರಹಿಸಿದ್ದು, ರಾಷ್ಟ್ರಪತಿಯವರಿಗೆ ಹಸ್ತಾಂತರಿಸಲಾಗುವುದು’ ಎಂದು ತಿಳಿಸಿದ್ದಾರೆ.
‘ಹೋರಾಟದ ರೂಪುರೇಷೆ ಕುರಿತಂತೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಬುಧವಾರ ಸಭೆ ಸೇರಿ ಚರ್ಚೆ ನಡೆಸಿದ್ದರು. ಇದೇ ನವೆಂಬರ್ 8ರಂದು ಅಭಿಯಾನ ಒಂದು ವರ್ಷ ಪೂರೈಸಲಿದೆ. ಆ ಪ್ರಯುಕ್ತ ಪಕ್ಷದ ಎಲ್ಲ ರಾಜ್ಯ ಘಟಕಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಸಮಾರಂಭದಲ್ಲಿ ಪಕ್ಷದ ಹಿರಿಯ ನಾಯಕರು, ಪದಾಧಿಕಾರಿ
ಗಳು ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕಾಪಾಡುವ ಕಾಂಗ್ರೆಸ್ ಪಕ್ಷದ ಸಾಮೂಹಿಕ ಏಕತೆ ಹಾಗೂ ಧೃಡಸಂಕಲ್ಪವನ್ನು ಪ್ರದರ್ಶಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.
‘ಮತ ಕಳವಿನ ಕುರಿತು ಪ್ರಬಲ ಸಾಕ್ಷಿಯಾಗಿ ದೇಶದಾದ್ಯಂತ 5 ಕೋಟಿ ಸಹಿ ಸಂಗ್ರಹಿಸಲಾಗಿದೆ. ನಕಲಿ ಮತದಾರರ ಸೇರ್ಪಡೆಗೊಳಿಸಿ, ನಕಲಿ ಮತದಾನದ ಮೂಲಕ ಪ್ರಜಾಪ್ರಭುತ್ವದ ಹತ್ಯೆ ಮಾಡುತ್ತಿರುವ ಕುರಿತು ಜನರ ಆಳವಾದ ಕಳಕಳಿಯೂ ಕಾಂಗ್ರೆಸ್ ಪಕ್ಷವು ನಡೆಸಿದ ಅಭಿಯಾನದ ಮೂಲಕ ವ್ಯಕ್ತವಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
‘ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಸಂಗ್ರಹಿಸಿದ ಎಲ್ಲ ಸಹಿಗಳನ್ನು ಎಐಸಿಸಿ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುತ್ತದೆ. ಇದಾದ
ಬಳಿಕ ಮುಂದಿನ ಹಂತದ ಅಭಿಯಾನದಲ್ಲಿ ದೇಶದಾದ್ಯಂತ ನಾಗರಿಕರ ಮತ್ತಷ್ಟು ಸಹಿಗಳನ್ನು ಸಂಗ್ರಹಿಸಲಾಗುವುದು’ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
‘ಅಂತಿಮವಾಗಿ ಈ ಎಲ್ಲ ಸಹಿಗಳು ದೇಶದ ಕೋಟ್ಯಂತರ ಜನರ ಧ್ವನಿಯನ್ನು ಪ್ರತಿನಿಧಿಸುತ್ತವೆ. ಆ ಮೂಲಕ ಚುನಾವಣಾ ಅಕ್ರಮವನ್ನು ತಕ್ಷಣವೇ ತಡೆಯಬೇಕು ಎಂದು ರಾಷ್ಟ್ರಪತಿ
ಯನ್ನು ಕೋರಲಿದ್ದೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.