
ನವದೆಹಲಿ: ಎ.ಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಯುವ ಘಟಕ ಅಂಗಿ ತೆಗೆದು ಪ್ರತಿಭಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಘಟನೆ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಿತೂರಿ ಇದೆ ಎಂದು ಬಿಜೆಪಿ ಮಂಗಳವಾರ ಆರೋಪಿಸಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ರಾಹುಲ್ ಗಾಂಧಿ ಸೂಚನೆಯ ಮೇರೆಗೆ ಕಾಂಗ್ರೆಸ್ ಯುವ ಘಟಕ ಈ ಪ್ರತಿಭಟನೆ ನಡೆಸಿದೆ ಎಂದು ಅವರು ದೂರಿದ್ದಾರೆ.
ಶೃಂಗಸಭೆಯಲ್ಲಿ ಅರಾಜಕತೆ ಸೃಷ್ಟಿಸಿ ದೇಶದ ಗೌರವ ಹಾಳು ಮಾಡುವ ಉದ್ದೇಶದಿಂದ ಈ ಪ್ರತಿಭಟನೆ ಮಾಡಲಾಗಿದೆ. ಇಂತಹ ಕೃತ್ಯವನ್ನು ಸಂಘಟಿಸಿದ ವ್ಯಕ್ತಿಗೆ ಶಿಕ್ಷೆಯಾಗಬೇಕು ಎಂದು ಗೌರವ್ ಭಾಟಿಯಾ ಹೇಳಿದರು.
ಈ ಘಟನೆಗೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ದೆಹಲಿ ನ್ಯಾಯಾಲಯ ನಾಲ್ಕು ದಿನ ಅವರನ್ನು ಪೊಲೀಸ್ ಬಂಧನಕ್ಕೆ ಒಪ್ಪಿಸಿದೆ.
ರಾಹುಲ್ ಗಾಂಧಿ ತಾನು ಕಾನೂನಿಗಿಂತ ದೊಡ್ಡವನು ಎಂಬ ಭಾವನೆ ಹೊಂದಿರಬಹುದು. ಆದರೆ ದೇಶದ ಗೌರವ ಹಾಳು ಮಾಡಲು ಯತ್ನಿಸಿದ ವ್ಯಕ್ತಿ ಯಾರು ಆಗಿರಲಿ ಅವರಿಗೆ ಕಾನೂನಿನ ಶಿಕ್ಷೆಯಾಗಲಿದೆ ಎಂದರು.
ಪೊಲೀಸ್ ಬಂಧನದಲ್ಲಿರುವ ಉದಯ್ ಭಾನು ತನಿಖೆ ವೇಳೆ ಸತ್ಯವನ್ನು ಹೇಳುವರು. ಈ ಘಟನೆಗೆ ಕಾರಣರಾದವರ ಹೆಸರನ್ನು ಬಹಿರಂಗಪಡಿಸುವರು. ಆಗ ದೇಶದ ಜನತೆಗೆ ಸತ್ಯ ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಎ.ಐ ಶೃಂಗಸಭೆಯ ‘ಎಕ್ಸ್‌ಪೋ’ ನಡೆದಿದ್ದ ಹಾಲ್‌ನಲ್ಲಿ ಕಳೆದ ಶುಕ್ರವಾರ ಕೆಲಹೊತ್ತು ಪ್ರತಿಭಟನೆ ನಡೆಸಿತ್ತು.
ಕಾರ್ಯಕರ್ತರು ಟಿ–ಶರ್ಟ್‌ಗಳನ್ನು ಬಿಚ್ಚಿ, ಮೋದಿ ವಿರುದ್ಧ ಹಾಗೂ ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ನಂತರ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.