ADVERTISEMENT

ಜೆಇಇ ಅಕ್ರಮ: 'ಸುಪ್ರೀಂ' ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 13:40 IST
Last Updated 4 ಸೆಪ್ಟೆಂಬರ್ 2021, 13:40 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ(ಪಿಟಿಐ): ಜೆಇಇ ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪದಲ್ಲಿಸಿಬಿಐ ಏಳು ಜನರನ್ನು ಬಂಧಿಸಿದ್ದು, ಈ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕೆಂದು ಕಾಂಗ್ರೆಸ್ ಶನಿವಾರ ಒತ್ತಾಯಿಸಿದೆ.

ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವ ಜವಾಬ್ದಾರಿ ಶಿಕ್ಷಣ ಸಚಿವಾಲಯ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯದ್ದು. ಇದಕ್ಕೆ ಇವುಗಳನ್ನು ಏಕೆ ಹೊಣೆಯಾಗಿಸಿಲ್ಲ ಎನ್ನುವುದಕ್ಕೆ ಬಿಜೆಪಿ ಸರ್ಕಾರ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಪಕ್ಷದ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಕೂಡ ಈ ವಿಷಯವಾಗಿ ಸೋಮವಾರ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ADVERTISEMENT

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಗೌರವ ವಲ್ಲಭ್, ದೆಹಲಿ ಕಾಂಗ್ರೆಸ್ ನಾಯಕ ಅಲ್ಕಾ ಲಂಬಾ ಮತ್ತು ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷ ನೀರಜ್ ಕುಂದನ್ ಅವರು, ಎನ್‌ಟಿಎ ನಡೆಸಿದ ಇತರ ಪರೀಕ್ಷೆಗಳಲ್ಲಿ ಇಂತಹ ಅಕ್ರಮಗಳು ನಡೆದಿಲ್ಲವೆಂದು ವಿದ್ಯಾರ್ಥಿಗಳು ನಂಬಿಕೆ ಇಡುವುದು ಹೇಗೆ ಎಂದು ಪ್ರಶ್ನಿಸಿದರು.

‘ನಮ್ಮ ದೇಶದ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರುವುದರಿಂದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಈ ವಂಚನೆಯ ಪ್ರಕರಣದ ತನಿಖೆಗೆ ನಾವು ಒತ್ತಾಯಿಸುತ್ತೇವೆ’ ಎಂದು ವಲ್ಲಭ್ ತಿಳಿಸಿದರು.

2021ರ ಸಾಲಿನ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪದಲ್ಲಿ ನೊಯ್ಡಾದ ಖಾಸಗಿ ಸಂಸ್ಥೆಯ ಇಬ್ಬರು ನಿರ್ದೇಶಕರು ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.