ADVERTISEMENT

ಹಿಂದೂ ಧರ್ಮ v/s ಹಿಂದುತ್ವ: ಶಶಿ ತರೂರ್‌ ಮರು ಪ್ರಕಟಿಸಿದ ಪೋಸ್ಟ್‌ನಲ್ಲಿ ಏನಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2021, 6:14 IST
Last Updated 29 ಡಿಸೆಂಬರ್ 2021, 6:14 IST
ಕಾಂಗ್ರೆಸ್‌ ಸಂಸದ ಶಶಿ ತರೂರ್‌
ಕಾಂಗ್ರೆಸ್‌ ಸಂಸದ ಶಶಿ ತರೂರ್‌   

ಬೆಂಗಳೂರು: ಉತ್ತರಾಖಂಡದ ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ 'ಧರ್ಮ ಸಂಸತ್‌' ಕಾರ್ಯಕ್ರಮದಲ್ಲಿ ಕೆಲವು ಸಂತರು ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡಿದ್ದರು. ಈ ಹೇಳಿಕೆಗಳಿಗೆ ಖಂಡನೆ ವ್ಯಕ್ತವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಕಾಂಗ್ರೆಸ್‌ನ ಸಂಸದ ಶಶಿ ತರೂರ್‌ ಅವರು 'ಹಿಂದೂ ಧರ್ಮ ಮತ್ತು ಹಿಂದುತ್ವಕ್ಕೆ' ಸಂಬಂಧಿಸಿದ ಹಳೆಯ ಟ್ವೀಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ (2020ರ ಜನವರಿ 8ರಂದು) ಪ್ರಕಟಿಸಿದ್ದ ಪೋಸ್ಟ್‌ ಅನ್ನು ಮತ್ತೆ ಹಂಚಿಕೊಳ್ಳುವ ಜೊತೆಗೆ 'ಈಗಲೂ ಪ್ರಸ್ತುತ' ಎಂಬ ಒಕ್ಕಣೆ ಬರೆದು ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಖಾತೆಗಳಿಗೆ ಟ್ಯಾಗ್‌ ಮಾಡಿದ್ದಾರೆ. ಹಿಂದೂ ಧರ್ಮಕ್ಕೆ ವಿರುದ್ಧವಾಗಿರುವುದು ಯಾವುದು ಎಂಬ ಹಣೆಪಟ್ಟಿಯೊಂದಿಗೆ'ಹಿಂದುತ್ವ'ದ ಬಗ್ಗೆ ಕೆಲವು ಸಾಲಿನ ವಿಶ್ಲೇಷಣೆ ನಡೆಸಿರುವುದು ಪ್ರಕಟಿಸಿರುವ ಚಿತ್ರದಲ್ಲಿದೆ.

ಹಿಂದುತ್ವ ಎಂಬುದು ಹಿಂದೂ ಧರ್ಮಕ್ಕೆ ಸರಿ ಸಮವಾದುದಲ್ಲ ಎಂದು ಹೋಲಿಕೆಗಳ ಮೂಲಕ ವಿಶ್ಲೇಷಿಸಿರುವುದನ್ನು ಇಲ್ಲಿ ಕಾಣಬಹುದಾಗಿದೆ. 'ಹಿಂದೂ ಧರ್ಮದ ಮೂಲ ಸಾವಿರಾರು ವರ್ಷಗಳಷ್ಟು ಹಳೆಯದು, ಹಿಂದುತ್ವವು ರಾಜಕೀಯ ಯೋಚನೆಯಾಗಿ ವಿನಾಯಕ ದಾಮೋದರ್‌ ಸಾವರ್ಕರ್‌ 1923ರಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಿದರು. ಹಿಂದೂ ಧರ್ಮಕ್ಕೆ ವೇದ, ಪುರಾಣಗಳು, ಇತಿಹಾಸಗಳ ಹಿನ್ನೆಲೆ ಇದೆ. ಅದೇ ಹಿಂದುತ್ವಕ್ಕೆ ಇರುವುದು 1928ರಲ್ಲಿ ಪ್ರಕಟವಾದ ರಾಜಕೀಯ ಕೇಂದ್ರಿತವಾದ ಕಿರು ಹೊತ್ತಿಗೆ 'ಹಿಂದುತ್ವ: ಹಿಂದೂ ಯಾರು?' (Hindutva: Who is a Hindu?) ಹಿನ್ನೆಲೆ ಮಾತ್ರ' ಎನ್ನುವ ಅಂಶಗಳಿವೆ.

ADVERTISEMENT

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಮಂಗಳವಾರ ಹಿಂದುತ್ವದ ಕುರಿತು ಪ್ರಸ್ತಾಪಿ, 'ಹಿಂದುತ್ವದಲ್ಲಿ ನಂಬಿಕೆ ಇಟ್ಟವರು ಯಾರ ಮುಂದೆಯಾದರೂ ತಲೆ ಬಾಗುತ್ತಾರೆ– ಅವರು ಬ್ರಿಟಿಷರ ಮುಂದೆ ತಲೆ ಬಾಗಿದರು ಹಾಗೂ ಹಣದ ಮುಂದೆಯೂ ತಲೆ ಬಾಗುತ್ತಾರೆ, ಏಕೆಂದರೆ ಅವರ ಹೃದಯಗಳಲ್ಲಿ ಸತ್ಯವೆಂಬುದಿಲ್ಲ' ಎಂದಿದ್ದರು.

ಇದಕ್ಕೆ ದನಿ ಗೂಡಿಸಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ರಾಹುಲ್‌ ಗಾಂಧಿ ಅವರು ಆರಂಭಿಸಿರುವ ಹಿಂದೂ ಮತ್ತು ಹಿಂದುತ್ವದ ಕುರಿತು ಚರ್ಚೆಯನ್ನು ದೇಶ ತಿಳಿದುಕೊಳ್ಳಬೇಕಿದೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.