ಕಿರಣ್ ರಿಜಿಜು
ನವದೆಹಲಿ: ರಾಹುಲ್ ಗಾಂಧಿ ಅವರು ಆರಂಭಿಸಿರುವ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯನ್ನು ಬಿಜೆಪಿಯು ‘ಭಾರತ್ ತೋಡೊ ಯಾತ್ರೆ’ ಎಂದು ಜರಿದಿದೆ. ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಆಡಳಿತ ಇದ್ದಾಗ ಜನರಿಗೆ ಆಗಿದ್ದ ಅನ್ಯಾಯಗಳನ್ನು ಸರಿಪಡಿಸುವ ಕೆಲಸವನ್ನು ಆ ಪಕ್ಷವು ಮೊದಲು ಮಾಡಬೇಕು ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ಸಿನಲ್ಲಿ ನ್ಯಾಯ ಸಿಗದ ಕಾರಣಕ್ಕೆ ಆ ಪಕ್ಷವನ್ನು ತೊರೆದ ನಾಯಕರ ಪಟ್ಟಿ ದೊಡ್ಡದಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ವ್ಯಂಗ್ಯವಾಡಿದರು. ‘ಇದೊಂದು ಹುಸಿ ಯಾತ್ರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಜನರಿಗೆ ನ್ಯಾಯ ಕೊಡಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ, ವಾಸ್ತವದಲ್ಲಿ ಕಾಂಗ್ರೆಸ್ಸಿನ ನಾಯಕರೇ ನ್ಯಾಯ ವಂಚಿತರು’ ಎಂದು ಠಾಕೂರ್ ಹೇಳಿದರು.
ರಾಹುಲ್ ಗಾಂಧಿ ಅವರು ತುಕ್ಡೆ–ತುಕ್ಡೆ ಗ್ಯಾಂಗ್‌ಗೆ ಬೆಂಬಲ ನೀಡಿದ್ದರು. ಹೀಗಾಗಿ ಅವರು ಈಗ ಭಾರತ್ ಜೋಡೊ ನ್ಯಾಯ ಯಾತ್ರೆಯ ನಾಟಕ ಆಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಎಕ್ಸ್ ವೇದಿಕೆಯಲ್ಲಿ ಬರೆದಿದ್ದಾರೆ.
ಪಕ್ಷದಲ್ಲಿ ವಂಶಪಾರಂಪರ್ಯದ ಪ್ರಭಾವ ಉಳಿಸಿಕೊಳ್ಳಲು ಹಾಗೂ ರಾಹುಲ್ ಗಾಂಧಿ ಅವರಿಗೆ ಹೆಚ್ಚಿನ ಆದ್ಯತೆ ನೀಡಲು ಕಾಂಗ್ರೆಸ್ ಪಕ್ಷವು ಈ ಯಾತ್ರೆಯನ್ನು ಆರಂಭಿಸಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಷ್ಟೂ ಪ್ರಯತ್ನವು ‘ತಾಯಿ ಮತ್ತು ಮಗನಿಗೆ ನ್ಯಾಯ ಕೊಡಿಸುವ ಹಾಗೂ ರಾಹುಲ್ ಅವರು ಬೆಳೆಯಲಿ’ ಎಂಬ ಉದ್ದೇಶ ಹೊಂದಿದೆ ಎಂದು ಗೌತಮ್ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.