ADVERTISEMENT

ಮಧ್ಯಪ್ರದೇಶ: ನೆಹರೂ ಚಿತ್ರ ತೆಗೆದು ಡಾ.ಅಂಬೇಡ್ಕರ್ ಚಿತ್ರ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 14:56 IST
Last Updated 19 ಡಿಸೆಂಬರ್ 2023, 14:56 IST
   

ಭೋಪಾಲ್‌: ಮಧ್ಯಪ್ರದೇಶ ವಿಧಾನಸಭೆಯಲ್ಲಿ ಅಳವಡಿಸಿದ್ದ, ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಭಾವಚಿತ್ರ ತೆಗೆದು, ಆ ಸ್ಥಾನದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಚಿತ್ರ ಹಾಕಲಾಗಿದೆ.

ರಾಜ್ಯದ ನೂತನ ಬಿಜೆಪಿ ಸರ್ಕಾರದ ಈ ನಡೆ ವಿವಾದಕ್ಕೆ ಆಸ್ಪದವಾಗಿದ್ದು, ಕಾಂಗ್ರೆಸ್‌ ಪಕ್ಷ ಖಂಡಿಸಿದೆ. 

ಡಾ.ಅಂಬೇಡ್ಕರ್ ಅವರ ಭಾವಚಿತ್ರದ ಅನಾವರಣ ಸ್ವಾಗತಾರ್ಹ. ಹಾಲಿ ಇದ್ದ ಮಹಾತ್ಮಗಾಂಧಿ ಮತ್ತು ನೆಹರೂ ಅವರ ಚಿತ್ರದ ಜೊತೆಗೆ ಇದನ್ನೂ ಅಳವಡಿಸಬೇಕಾಗಿತ್ತು ಎಂದು ಕಾಂಗ್ರೆಸ್‌ ಹೇಳಿದೆ. ಬಿಜೆಪಿಯು ದೇಶದ ನಿರ್ಮಾತೃವಿಗೆ ಅಗೌರವ ತೋರುತ್ತಿದೆ ಎಂದೂ ತರಾಟೆಗೆ ತೆಗೆದುಕೊಂಡಿದೆ. 

ADVERTISEMENT

ನೂತನ ವಿಧಾನಸಭೆಯ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಎ.ಪಿ.ಸಿಂಗ್, ‘ನೆಹರೂ ಭಾವಚಿತ್ರವನ್ನು ಕಳೆದ ಅಧಿವೇಶನದ ಅವಧಿಯಲ್ಲಿಯೇ ಬದಲಾವಣೆ ಮಾಡಲಾಗಿತ್ತು’ ಎಂದು ತಿಳಿಸಿದರು.

‘ನೆಹರೂ ಭಾವಚಿತ್ರವು ಹಳೆಯದಾಗಿತ್ತು. ಹಿಂದಿನ ಸ್ಪೀಕರ್ ಗಿರೀಶ್ ಗೌತಮ್‌ ಕಳೆದ ಜುಲೈನಲ್ಲಿಯೇ ಬದಲಿಸಲು ಸೂಚಿಸಿದ್ದರು. ಆಗ ಅಂಬೇಡ್ಕರ್ ಅವರ 125ನೇ ಜನ್ಮಶತಮಾನೋತ್ಸವ ನಡೆಯುತ್ತಿತ್ತು. ಹೀಗಾಗಿ, ನೆಹರೂ ಚಿತ್ರದ ಬದಲಿಗೆ ಡಾ.ಅಂಬೇಡ್ಕರ್ ಚಿತ್ರಹಾಕಲು ಸೂಚಿಸಿದ್ದರು. ನೆಹರೂ ಅವರ ಚಿತ್ರವನ್ನು ಗ್ರಂಥಾಲಯದಲ್ಲಿ ಗೌರವಯುತವಾಗಿಯೇ ಇಡಲಾಗಿದೆ’ ಎಂದು ಅವರು ತಿಳಿಸಿದರು.

ಈ ಮಧ್ಯೆ, ‘ಬಿಜೆಪಿಯ ಉದ್ದೇಶ ಪ್ರಾಮಾಣಿಕವಾಗಿದ್ದಲ್ಲಿ ನೆಹರೂ, ಗಾಂಧಿ ಚಿತ್ರದ ಜೊತೆಗೆ ಅಂಬೇಡ್ಕರ್ ಅವರದನ್ನೂ ಇಡಬಹುದಿತ್ತು. ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ಸೂಚಿಸುವುದು ಆ ಪಕ್ಷದ ಸಂಸ್ಕೃತಿಯಾಗಿದೆ’ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಘಟಕ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.