ADVERTISEMENT

ದೇಶದಲ್ಲಿ ಸರ್ವಾಧಿಕಾರ, ಅಘೋಷಿತ ತುರ್ತು ಪರಿಸ್ಥಿತಿ ಇದೆ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 2:23 IST
Last Updated 14 ಜೂನ್ 2022, 2:23 IST
   

ನವದೆಹಲಿ:ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ‘ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಹಣಿಯುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಸರ್ವಾಧಿಕಾರ ಹಾಗೂ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ಇದೆ’ ಎಂದು ಆರೋಪಿಸಿದೆ.

‘ಫ್ಯಾಸಿಸ್ಟ್‌ಗಳು ವಿರೋಧ ಪಕ್ಷಗಳನ್ನು ಇಷ್ಟ ಪಡುವುದಿಲ್ಲ. ಆದರೆ,ವಿರೋಧ ಪಕ್ಷ ಇದ್ದಾಗಲೇ ಪ್ರಜಾಪ್ರಭುತ್ವ ಕೆಲಸ ಮಾಡುತ್ತದೆ’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹಲೋತ್‌ ಹೇಳಿದರು.

‘ಬೆಲೆ ಏರಿಕೆ, ಹಣದುಬ್ಬರ, ಕೋಮುಗಲಭೆಯಂತಹ ಸೂಕ್ಷ್ಮ ವಿಚಾರಗಳನ್ನು ದೇಶವು ಎದುರಿಸುತ್ತಿರುವ ಸಂದರ್ಭದಲ್ಲೇ ಸರ್ಕಾರವು ಸುಳ್ಳು ‍ಪ್ರಕರಣಗಳನ್ನು ದಾಖಲಿಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿದೆ’ ಎಂದರು.

ADVERTISEMENT

ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಮಾತನಾಡಿ, ‘ಕಾಂಗ್ರೆಸ್‌ನ ಹಲವು ಕಾರ್ಯಕರ್ತರು ಶಾಂತಿಯತ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಕಾಂಗ್ರೆಸ್‌ ಕೇಂದ್ರ ಕಚೇರಿಗೆ ಹೋಗಲು ಅವರಿಗೆ ಅವಕಾಶ ನಿರಾಕರಿಸಲಾಯಿತು. ದೇಶದಲ್ಲಿಸರ್ವಾಧಿಕಾರಿ ಸರ್ಕಾರ ಇದೆ’ ಎಂದು ಕಿಡಿಕಾರಿದರು.

ಪಕ್ಷದ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ, ‘ಕಾಂಗ್ರೆಸ್‌ ನಾಯಕರು ಯಾವುದೇ ತಪ್ಪು ಮಾಡಿಲ್ಲ. ಗೋಡ್ಸೆ ವಂಶಸ್ಥರು ಸತ್ಯವನ್ನು ಹೆದರಿಸುತ್ತಿದ್ದಾರೆ. ಅವರು ಇದರಲ್ಲಿ ಯಶಸ್ಸು ಗಳಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.