
ನವದೆಹಲಿ: ಅಮೆರಿಕದೊಂದಿಗಿನ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಇದು 'ಅಬ್ ಕಿ ಬಾರ್ ಟ್ರಂಪ್ ಸೇ ಹಾರ್' ಎಂಬುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಅಕ್ರಮ ಸುಂಕಕ್ಕೆ ಅಲ್ಲಿನ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಹಾಗಾಗಿ ಈ ತೀರ್ಪಿಗೂ ಮುನ್ನ ದ್ವಿಪಕ್ಷೀಯ ವ್ಯಾಪಾರದ ಮಧ್ಯಂತರ ಚೌಕಟ್ಟು ರೂಪಿಸುವ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆಗಳನ್ನು ಕೇಳಬಯಸುತ್ತೇವೆ. ಫೆಬ್ರುವರಿ 2ರಂದು ಪ್ರಧಾನಿ ಮೋದಿ ಅವರ ಕೋರಿಕೆಯ ಮೇರೆಗೆ ಅವರೊಂದಿಗಿನ ಸ್ನೇಹ ಹಾಗೂ ಗೌರವದಿಂದ ತಕ್ಷಣವೇ ಜಾರಿಗೆ ಬರುವಂತೆ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿಸಿದ್ದೇವೆ ಎಂದು ಟ್ರಂಪ್ ಹೇಳಿದ್ದರು. ಫೆ.2ರಂದು ಟ್ರಂಪ್ ಈ ಟ್ವೀಟ್ ಮಾಡುವಂತೆ ಮೋದಿ ಒತ್ತಾಯಿಸಿದ್ದರು' ಎಂದು ಅವರು ಆರೋಪಿಸಿದ್ದಾರೆ.
'ಫೆ.2ರಂದು ಏನು ನಡೆಯಿತು ಗೊತ್ತೇ? ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಷಣದಿಂದ ವಿಚಲಿತಗೊಂಡ ಪ್ರಧಾನಿ, ಗಮನವನ್ನು ಬೇರೆಡೆಗೆ ಸೆಳೆಯಲು ಹೀಗೆ ಮಾಡಿದರು. ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ಬರುವ ಮುನ್ನ ಒಪ್ಪಂದಕ್ಕಾಗಿ ಏಕೆ ಆತುರಪಟ್ಟಿದ್ದೀರಿ?' ಎಂದು ಅವರು ಪ್ರಶ್ನಿಸಿದ್ದಾರೆ.
'ನಮ್ಮ ಎರಡನೇ ಪ್ರಶ್ನೆ, ಟ್ರಂಪ್ ಸುಂಕ ನೀತಿ ಬದಲಿಸಿರುವುದರಿಂದ ಕೃಷಿ ಮೇಲೆ ವಿಧಿಸಿರುವ ಸುಂಕ ತೆಗೆದು ಹಾಕಲು ಅಥವಾ ಕಡಿಮೆ ಮಾಡಲು ಪ್ರಧಾನಿ ಮೋದಿ ಧೈರ್ಯ ತೋರುತ್ತಾರೆಯೇ' ಎಂದು ಕೇಳಿದ್ದಾರೆ.
'ಮೂರನೇಯದಾಗಿ ರಷ್ಯಾದಿಂದ ತೈಲ ಖರೀದಿಸುದಿಲ್ಲವೆಂದು ಮೋದಿ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದೆಡೆ ಮೋದಿ ಖರೀದಿಸುವುದಾಗಿ ಹೇಳುತ್ತಾರೆ. ಹಾಗಿದ್ದರೆ ಇದರ ನಿಜ ಸ್ಥಿತಿ ಏನು?' ಎಂದು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.