
ಲಾತೂರ್: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ(90) ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ಸ್ವಗೃಹ ‘ದೇವಘರ್’ನಲ್ಲಿ ಶುಕ್ರವಾರ ನಿಧನರಾದರು.
ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅವರಿಗೆ ಪುತ್ರ ಶೈಲೇಶ್ ಪಾಟೀಲ ಹಾಗೂ ಸೊಸೆ ಅರ್ಚನಾ ಪಾಟೀಲ ಇದ್ದಾರೆ. ಕಳೆದ ವರ್ಷ ಬಿಜೆಪಿ ಸೇರಿದ್ದ ಅರ್ಚನಾ ಪಾಟೀಲ, ಲಾತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಅಮಿತ್ ದೇಶಮುಖ್ ವಿರುದ್ಧ ಪರಾವಭವಗೊಂಡಿದ್ದರು.
2008ರ ನವೆಂಬರ್ 26ರಂದು ಮುಂಬೈ ಮೇಲೆ ಭಯೋತ್ಪಾಕರ ದಾಳಿ ನಡೆದಿತ್ತು. ಆಗ, ಶಿವರಾಜ್ ಪಾಟೀಲ ಅವರು ಕೇಂದ್ರ ಗೃಹ ಸಚಿವರಾಗಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ವಿವಿಧ ಪಕ್ಷಗಳ ನಾಯಕರು ಶಿವರಾಜ್ ಪಾಟೀಲ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪಾಟೀಲ ಅವರು 1935ರ ಅಕ್ಟೋಬರ್ 12ರಂದು ಜನಿಸಿದ್ದರು. 1966ರಿಂದ 1970ರ ನಡುವೆ, ಲಾತೂರ್ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಅವರ ರಾಜಕೀಯ ಪಯಣ ಆರಂಭವಾಗಿತ್ತು.
ಎರಡು ಅವಧಿಗೆ ಶಾಸಕರಾಗಿದ್ದ ಅವರು, ಮಹಾರಾಷ್ಟ್ರ ವಿಧಾನಸಭೆ ಉಪ ಸಭಾಧ್ಯಕ್ಷ, ಸಭಾಧ್ಯಕ್ಷರಾಗಿದ್ದರು. ನಂತರ ಲಾತೂರ್ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾದ ಅವರು, 1991ರಿಂದ 1996ರವರೆಗೆ ಲೋಕಸಭೆಯ ಸ್ಪೀಕರ್ ಆಗಿದ್ದರು. ಕೇಂದ್ರದಲ್ಲಿ ರಕ್ಷಣೆ, ವಾಣಿಜ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಸೇವೆ ಸಲ್ಲಿಸಿದ್ದರು.
2010ರಿಂದ 2015ರವರೆಗೆ ಪಂಜಾಬ್ ರಾಜ್ಯಪಾಲರಾಗಿದ್ದ ಅವರು, ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
Cut-off box - ಹಲವು ವಿವಾದ ರಾಜೀನಾಮೆ... ಶಿವರಾಜ್ ಪಾಟೀಲ ಅವರು ನೀಡಿದ್ದ ಕೆಲ ಹೇಳಿಕೆಗಳು ಹಾಗೂ ನಡೆಗಳು ವಿವಾದಕ್ಕೆ ಕಾರಣವಾಗಿದ್ದವು. ಮುಂಬೈ ಮೇಲಿನ ಉಗ್ರರ ದಾಳಿ ವಿಚಾರದಲ್ಲಿ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಬೇಕಾಯಿತು. 2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆಗ ಕೇಂದ್ರ ಗೃಹ ಸಚಿವರಾಗಿದ್ದ ಶಿವರಾಜ್ ಪಾಟೀಲ ಅವರು ಆ ದಿನ ರಾತ್ರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಮೂರು ವಿಧದ ದಿರಿಸುಗಳನ್ನು ಧರಿಸಿದ್ದ ಅವರ ನಡೆ ವ್ಯಾಪಕ ಟೀಕೆಗೆ ಒಳಗಾಗಿತ್ತು. ತಮ್ಮ ವಿರುದ್ಧದ ಟೀಕೆಗಳಿಗೆ‘ಜನರು ಸರ್ಕಾರದ ನೀತಿಗಳನ್ನು ಟೀಕಿಸಬೇಕೇ ಹೊರತು ನಾನು ಧರಿಸಿದ ಬಟ್ಟೆಗಳ ಕುರಿತಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ನಂತರ ಅವರು ನವೆಂಬರ್ 30ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 2022ರಲ್ಲಿ ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ‘ಜಿಹಾದ್ ಪರಿಕಲ್ಪನೆ ಇಸ್ಲಾಮ್‌ನಲ್ಲಿ ಮಾತ್ರವಲ್ಲ ಭಗವದ್ಗೀತೆ ಹಾಗೂ ಕ್ರೈಸ್ತ ಧರ್ಮದಲ್ಲಿಯೂ ಇದೆ’ ಎಂದು ಹೇಳಿದ್ದರು. ಇದು ಕೂಡ ವಿವಾದಕ್ಕೀಡಾಗಿತ್ತಲ್ಲದೇ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.