ನರೇಂದ್ರ ಮೋದಿ, ಎಚ್.ಡಿ. ದೇವೇಗೌಡ
(ಪಿಟಿಐ ಚಿತ್ರ)
ಬೆಂಗಳೂರು: 'ಕಾಂಗ್ರೆಸ್‌ನಿಂದ ಮಾತ್ರ ದೇಶವನ್ನು ಒಗ್ಗಟ್ಟಾಗಿ ಇರಿಸಲು ಸಾಧ್ಯ ಎಂಬ ಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಬದಲಾಯಿಸಿದ್ದಾರೆ' ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಬರೆದುಕೊಂಡಿರುವ ಪತ್ರದಲ್ಲಿ ದೇವೇಗೌಡ, ಹೀಗೆ ಬರೆದುಕೊಂಡಿದ್ದಾರೆ.
'ಪ್ರಧಾನಿ ಮೋದಿ ಅವರ 75ನೇ ಹುಟ್ಟುಹಬ್ಬಕ್ಕೆ ನಾನು ಶುಭಾಶಯಗಳನ್ನು ಕೋರುತ್ತೇನೆ. ದೇವರು ಸದಾ ನಿಮ್ಮೊಂದಿಗಿರಲಿ ಮತ್ತು ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಶಕ್ತಿ ತುಂಬಲಿ' ಎಂದು ಹೇಳಿದ್ದಾರೆ.
'ಮೋದಿ ಅಧಿಕಾರಕ್ಕೆ ಬಂದ ಬಳಿಕ ಕಳೆದ 11 ವರ್ಷಗಳಲ್ಲಿ ಸಾಮಾಜಿಕ-ಆರ್ಥಿಕ ಸ್ಥಿರತೆ ಹಾಗೂ ಭದ್ರತೆಯನ್ನು ಖಚಿತಪಡಿಸಲಾಗಿದೆ. ಪ್ರತಿ ಚುನಾವಣೆಯಲ್ಲೂ ದೇಶದ ಜನರು ಇದನ್ನು ಸಾಬೀತು ಮಾಡಿದ್ದಾರೆ. ಭಾರತವು ಬೃಹತ್, ವೈವಿಧ್ಯಮಯ ಹಾಗೂ ಸಂಕೀರ್ಣ ರಾಷ್ಟ್ರವಾಗಿದ್ದು, ಒಗ್ಗಟ್ಟಾಗಿ ಇರಿಸುವುದು, ಶಾಂತಿ ಸ್ಥಾಪನೆ ಸುಲಭದ ಕೆಲಸವಲ್ಲ' ಎಂದು ದೇವೇಗೌಡ ಉಲ್ಲೇಖಿಸಿದ್ದಾರೆ.
'ಕಳೆದೊಂದು ದಶಕದಲ್ಲಿ ದೇಶದ ಮನಸ್ಥಿತಿ ಬದಲಾಗಿದೆ. ದೇಶವನ್ನು ಒಗ್ಗಟ್ಟಿನಲ್ಲಿರಿಸಲು, ಸ್ಧಿರತೆ ಹಾಗೂ ಉತ್ತಮ ಆಡಳಿತ ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂಬ ಕಲ್ಪನೆಯಿತ್ತು. ಆದರೆ ನೀವು (ಮೋದಿ) ಈ ಭಾವನೆಯನ್ನು ಶಾಶ್ವತವಾಗಿ ಕೊನೆಗೊಳಿಸಿದ್ದೀರಿ. ದೇಶದಲ್ಲಿ ಪ್ರತಿಭೆಗಳಿಗೆ ಕಡಿಮೆಯಿಲ್ಲ ಎಂಬುದನ್ನು ಸಾಬೀತು ಮಾಡಿದ್ದೀರಿ. ನಮ್ಮ ಪ್ರಜಾಪ್ರಭುತ್ವ ದೇಶದ ಅವಕಾಶಗಳನ್ನು ತೆರೆದಿದ್ದೀರಿ ಮತ್ತು ಅದರ ಉಜ್ವಲ ಭವಿಷ್ಯದಲ್ಲಿ ಅಚಲ ನಂಬಿಕೆಯನ್ನು ಇಟ್ಟಿದ್ದೀರಿ' ಎಂದು ಹೊಗಳಿದ್ದಾರೆ.
'ಇತ್ತೀಚೆಗಿನ ಮಿಲಿಟರಿ ಸಂಘರ್ಷ ಹಾಗೂ ಆರ್ಥಿಕ ಸವಾಲುಗಳನ್ನು ದೇಶದ ಅವಕಾಶವನ್ನಾಗಿ ಬದಲಾಯಿಸಿದ್ದಾರೆ. ಭಾರತವು ಇನ್ನು ಮುಂದೆ ಒಪ್ಪಂದ, ನೆರವಿಗಾಗಿ ಪಾಶ್ಚಿಮಾತ್ಯ ಶಕ್ತಿಗಳ ಬಳಿಗೆ ಓಡಿ ಹೋಗುವುದಿಲ್ಲ. ಬದಲಾಗಿ ಸಮಾನ ಸಂಧಾನ ಮಾತುಕತೆ ನಡೆಸಲಿದೆ. ಅಲ್ಲದೆ ರಾಷ್ಟ್ರೀಯ ಹಿತಾಸಕ್ತಿಗೆ ಪ್ರಮುಖ ಆದ್ಯತೆಯನ್ನು ನೀಡುತ್ತದೆ. 'ದೇಶವೇ ಮೊದಲು' ಎಂಬ ನಿಮ್ಮ ಘೋಷಣೆ ಬರಿ ಪೊಳ್ಳು ಮಾತಲ್ಲ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.