ADVERTISEMENT

UP Polls: ಬಿಜೆಪಿ ಸೇರಲು ಪಕ್ಷ ತೊರೆದ ಕಾಂಗ್ರೆಸ್ ಪ್ರಚಾರಕ ಆರ್‌ಪಿಎನ್‌ ಸಿಂಗ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 9:27 IST
Last Updated 25 ಜನವರಿ 2022, 9:27 IST
ಆರ್‌ಪಿಎನ್‌ ಸಿಂಗ್ (ಚಿತ್ರ ಕೃಪೆ – @SinghRPN)
ಆರ್‌ಪಿಎನ್‌ ಸಿಂಗ್ (ಚಿತ್ರ ಕೃಪೆ – @SinghRPN)   

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದ ಮರುದಿನವೇ ಆರ್‌ಪಿಎನ್‌ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸೇರುವುದಕ್ಕಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಜಾರ್ಖಂಡ್ ಮತ್ತು ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಸಿಂಗ್, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ದೇಶಕ್ಕೆ ಹಾಗೂ ದೇಶದ ಜನರಿಗೆ ಸೇವೆ ಸಲ್ಲಿಸಲು ಪಕ್ಷದಲ್ಲಿ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.

‘ಗಣರಾಜ್ಯ ಉದಯಿಸಿದ ದಿನವನ್ನು ನಾವು ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಾನು ರಾಜಕೀಯ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿದ್ದೇನೆ. ಜೈ ಹಿಂದ್,’ ಎಂದು ರಾಜೀನಾಮೆ ಪತ್ರದ ಪ್ರತಿಯೊಂದಿಗೆ ಅವರು ಟ್ವೀಟ್ ಮಾಡಿದ್ದಾರೆ.

ಅವರು ಇಂದೇ ಬಿಜೆಪಿ ಸೇರುವ ಸಾಧ್ಯತೆ ಇದೆ. ಜಿತಿನ್ ಪ್ರಸಾದ ಅವರ ಬಳಿಕ ಬಿಜೆಪಿ ಸೇರುತ್ತಿರುವ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದಾರೆ.

ಆರ್‌ಪಿಎನ್‌ ಸಿಂಗ್ (58) ಎಂದೇ ಖ್ಯಾತರಾಗಿರುವ ರತನ್‌ಜಿತ್ ಪ್ರತಾಪ್ ನಾರಾಯಣ್ ಸಿಂಗ್ ಅವರನ್ನು ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ (ಇತ್ತೀಚೆಗೆ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದ್ದರು) ವಿರುದ್ಧ ಬಿಜೆಪಿ ಕಣಕ್ಕಿಳಿಸುವ ನಿರೀಕ್ಷೆ ಇದೆ.

ಪಡ್‌ರೌನಾದ ರಾಜಮನೆತನದ ಹಿನ್ನೆಲೆಯುಳ್ಳ ಸಿಂಗ್, 1996 ಹಾಗೂ 2009ರ ಅವಧಿಯಲ್ಲಿ ಪಡ್‌ರೌನಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2009ರಲ್ಲಿ ಕುಶೀನಗರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2014 ಹಾಗೂ 2019ರಲ್ಲಿ ಸೋಲನುಭವಿಸಿದ್ದರು.

1997ರಿಂದ 1999ರ ವರೆಗೆ ಉತ್ತರ ಪ್ರದೇಶ ಕಾಂಗ್ರೆಸ್‌ ಯುವ ಮೋರ್ಚಾದ ಅಧ್ಯಕ್ಷರಾಗಿದ್ದರು. 2003ರಿಂದ 2006ರ ವರೆಗೆ ಎಐಸಿಸಿ ಕಾರ್ಯದರ್ಶಿಯಾಗಿದ್ದರು.

2009ರಲ್ಲಿ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ರಸ್ತೆ, ಸಾರಿಗೆ ಮತ್ತು ಹೆದ್ದಾರಿ, ಪೆಟ್ರೋಲಿಯಂ ಹಾಗೂ ಗೃಹ ಇಲಾಖೆಗಳ ರಾಜ್ಯ ಖಾತೆ ಸಚಿವರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.