ADVERTISEMENT

ನಾಯಕತ್ವದ ಪ್ರಶ್ನೆ| 24ಕ್ಕೆ ಕಾರ್ಯಕಾರಿ ಸಭೆ: ಏನಾಗುತ್ತಿದೆ ಕಾಂಗ್ರೆಸ್‌ನಲ್ಲಿ?

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 3:15 IST
Last Updated 23 ಆಗಸ್ಟ್ 2020, 3:15 IST
ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ರಾಬರ್ಟ್‌ ವಾದ್ರಾ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ
ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ರಾಬರ್ಟ್‌ ವಾದ್ರಾ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ    

ದೆಹಲಿ: ಕಾಂಗ್ರೆಸ್‌ನೊಳಗೆ ಉದ್ಭವಿಸಿರುವ ನಾಯಕತ್ವದ ಪ್ರಶ್ನೆ ಮತ್ತು ರಾಹುಲ್‌ ಗಾಂಧಿ ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾಗಬೇಕು ಎಂಬ ವಾದ, ಚರ್ಚೆಗಳ ನಡುವೆಯೇ ಕಾಂಗ್ರೆಸ್‌ನ ಕಾರ್ಯಕಾರಿ ಸಮತಿ (ಸಿಡಬ್ಲ್ಯುಸಿ) ಸಭೆ ಸೋಮವಾರ ನಡೆಯುತ್ತಿದೆ.

‘ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯು ಆಗಸ್ಟ್ 24 ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ.

ಕಳೆದ ವರ್ಷ ಲೋಕಸಭೆ ಚುನಾವಣೆ ಸೋಲಿನ ನಂತರ ಪಕ್ಷದ ಅಧ್ಯಕ್ಷ ಹುದ್ದೆ ತ್ಯಜಿಸಿದ್ದ ರಾಹುಲ್ ಗಾಂಧಿ ಅವರನ್ನೇ ಮತ್ತೊಮ್ಮೆ ಅತ್ಯುನ್ನತ ಹುದ್ದೆಯಲ್ಲಿ ಪ್ರತಿಷ್ಠಾಪಿಸಲು ಮನವೊಲಿಸುವ ಪ್ರಯತ್ನಗಳು ಕಾಂಗ್ರೆಸ್ ಒಳಗೆ ಸತತವಾಗಿ ನಡೆಯುತ್ತಿವೆ. ಕಳೆದ ವರ್ಷ ಆಗಸ್ಟ್ 10 ರಂದು ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಸೋನಿಯಾ ಗಾಂಧಿಯನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕುಟುಂಬದವರಲ್ಲದವರನ್ನು ಆಯ್ಕೆ ಮಾಡುವಂತೆ 50ರ ಪ್ರಾಯದ ರಾಹುಲ್ ಅವರು ಪಕ್ಷದ ಮುಖಂಡರಿಗೆ ತಿಳಿಸಿದ್ದಾರೆ. ಅವರ ಸೋದರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಪಕ್ಷವು ಪೂರ್ಣಾವಧಿಯ ಅಧ್ಯಕ್ಷರ ಕೈಯಲ್ಲಿಲ್ಲದೆ ಇರುವುದರಿಂದ ಚಲನೆ ಕುಂಠಿತಗೊಂಡಿರುವ ಬಗ್ಗೆ ಪಕ್ಷದ ಹಿರಿಯ ಮುಖಂಡರ ಗುಂಪೊಂದು ಆತಂಕ ವ್ಯಕ್ತಪಡಿಸಿದೆ. ಒಂದು ವೇಳೆ ಗಾಂಧಿ ಕುಟುಂಬವೇನಾದರೂ ಪಕ್ಷವನ್ನು ಮುನ್ನಡೆಸಲು ನಿರಾಕರಿಸಿದರೆ ಆತ್ಮಾವಲೋಕನ ಮತ್ತು ಆಂತರಿಕ ಚುನಾವಣೆಗಳ ಮೂಲಕ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ.

ಹಿರಿಯ ನಾಯಕರಾದ ಶಶಿ ತರೂರ್ ಮತ್ತು ಮನೀಶ್ ತಿವಾರಿ ಅವರು ಕಾಂಗ್ರೆಸ್‌ ಸಂಘಟನೆಯ ಪುನಾರಚನೆ ಮತ್ತು ಪಕ್ಷದ ಅತ್ಯುನ್ನತ ಸಮಿತಿಯಾದ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಾಂಧಿ ಕುಟುಂಬದಿಂದ ಹೊರತಾದವರೊಬ್ಬರು ಪಕ್ಷದ ಅಧ್ಯಕ್ಷರಾಗಬೇಕು ಎಂಬ ರಾಹುಲ್‌ ಗಾಂಧಿ ಅವರ ಅಭಿಪ್ರಾಯವನ್ನು ಅನುಮೋದಿಸಿರುವ ಪ್ರಿಯಾಂಕಾ ಗಾಂಧಿ ಅವರ ಸಂದರ್ಶನವೊಂದು ಕಳೆದವಾರ ಇಡೀ ಪಕ್ಷದಲ್ಲಿ ಸಂಚಲನವನ್ನೂ ಸೃಷ್ಟಿ ಮಾಡಿತ್ತು. ರಾಹುಲ್‌ ಗಾಂಧಿ ಅವರನ್ನು ಮತ್ತೊಮ್ಮೆ ಪಕ್ಷದ ಅಧ್ಯಕ್ಷರನ್ನಾಗಿಸಬೇಕು ಎಂಬ ಅಭಿಲಾಷೆಯುಳ್ಳ ನಾಯಕರಿಗೆ ಇದು ಹಿನ್ನಡೆಯ ಅನುಭವ ನೀಡಿತ್ತು.

ಇನ್ನೊಂದು ಕಡೆ, ಕೇಂದ್ರದ ಮೋದಿ ಸರ್ಕಾರದ ಮೇಲೆ ನಿರಂತರ ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿಯವರೇ ಮತ್ತೆ ಪಕ್ಷದ ಉನ್ನತ ಹುದ್ದೆಗೆ ಹಿಂತಿರುಗಬೇಕೆಂದು ‘ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು’ ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಂಬಿದೆ.

ನಾಯಕತ್ವ ಸಮಸ್ಯೆ ಬಗೆಹರಿಸಿಕೊಳ್ಳಲು ಸೋನಿಯಾ ಸೂಚನೆ

ಈ ಮಧ್ಯೆ ಕಾಂಗ್ರೆಸ್‌ ಹಾಲಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರಿಗೆ ಹುದ್ದೆಯಲ್ಲಿ ಮುಂದುವರಿಯುವ ಮನಸ್ಸಿಲ್ಲ ಎಂದು ಹೇಳಲಾಗಿದ್ದು, ಶೀಘ್ರವೇ ನಾಯಕತ್ವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷದ ಅಧ್ಯಕ್ಷ ಸ್ಥಾನದ ಮೇಲೆ ರಾಹುಲ್‌ ಗಾಂಧಿ ಅವರಿಗೆ ಸದ್ಯ ಆಸಕ್ತಿ ಇಲ್ಲದೇ ಇರಬಹುದು. ಆದರೆ, ಸಂಘಟನೆಗೆ ಸಂಬಂಧಿಸಿದ ಪ್ರಮುಖ ನೇಮಕಾತಿಗಳಲ್ಲಿ ಮತ್ತು ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಅವರು ಹಿಡಿತ ಹೊಂದುವ ಸಾಧ್ಯತೆಗಳು ಗೋಚರಿಸಿವೆ. ರಾಜಸ್ಥಾನದಲ್ಲಿ ಉದ್ಭವವಾಗಿದ್ದ ವಿವಾದ ಬಗೆಹರಿಸುವಲ್ಲಿ ರಾಹುಲ್‌ ಮತ್ತು ಪ್ರಿಯಾಂಕಾ ನಡೆದುಕೊಂಡ ರೀತಿ ಈ ವಾದಕ್ಕೆ ಪೂರಕ ಎಂಬಂತಿದೆ.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌–ಸಚಿನ್‌ ಪೈಲಟ್‌ ನಡುವೆ ಉದ್ಭವಿಸಿದ್ದ ಮನಸ್ತಾಪ ಬಗೆಹರಿಸಲು ರಾಹುಲ್‌ ಹಾಗೂ ಪ್ರಿಯಾಂಕಾ ಸಂಘಟನೆಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳನ್ನು ಮಾಡಿದ್ದರು.

ಆದರೂ, ರಾಹುಲ್‌ ಗಾಂಧಿ ಅವರು ಹಿಂದಿನ ಆಸನದಲ್ಲಿ ಕುಳಿತು ಪಕ್ಷವನ್ನು ನಿಯಂತ್ರಿಸುವ ಬದಲಿಗೆ, ನೇರವಾಗಿ ನಾಯಕತ್ವ ವಹಿಸಿಕೊಂಡು ಪಕ್ಷವನ್ನು ಮುನ್ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್‌ನ ಹಲವು ನಾಯಕರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.