ನವದೆಹಲಿ: ಕಾಂಗ್ರೆಸ್‌ನ ‘ರಾಷ್ಟ್ರೀಯ ಮೈತ್ರಿ ಸಮಿತಿ’ಯು (ಎನ್‌ಎಸಿ) ಪಕ್ಷದ ರಾಜ್ಯ ಘಟಕಗಳ ಜೊತೆ ಶುಕ್ರವಾರ ಮತ್ತು ಶನಿವಾರ ಸಭೆ ನಡೆಸಿದೆ. ‘ಇಂಡಿಯಾ’ ಮೈತ್ರಿಕೂಟದ ಸಹವರ್ತಿ ಪಕ್ಷಗಳ ಜೊತೆ ಲೋಕಸಭೆ ಚುನಾವಣೆಗಾಗಿ ಸ್ಥಾನ ಹಂಚಿಕೆ ಮಾಡಿಕೊಳ್ಳುವ ಕುರಿತು ಮಾತುಕತೆ ಆರಂಭಿಸುವ ಪೂರ್ವಭಾವಿಯಾಗಿ ಈ ಸಭೆ ನಡೆದಿದೆ.
ಬಹುತೇಕ ರಾಜ್ಯಗಳ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಂಜಾಬ್ ಮತ್ತು ಕೆಲ ರಾಜ್ಯಗಳ ನಾಯಕರ ಜೊತೆಗೆ ಇನ್ನಷ್ಟೇ ಮಾತುಕತೆ ನಡೆಸಬೇಕಿದೆ ಎಂದು ಮೈತ್ರಿ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.
‘ತಳಮಟ್ಟದಲ್ಲಿ ಪಕ್ಷದ ಸ್ಥಿತಿಗತಿ ಕುರಿತು ಕಾರ್ಯಕರ್ತರು ಮತ್ತು ನಾಯಕರಿಂದ ಅಭಿಪ್ರಾಯ ಪಡೆದು, ಮುಂದಿನ ದಿನಗಳಲ್ಲಿ ನಮ್ಮ ಕಾರ್ಯವೈಖರಿ ಹೇಗಿರಬೇಕು ಎಂದು ನಿರ್ಧರಿಸುವುದು ನಮ್ಮ ಕೆಲಸವಾಗಿತ್ತು’ ಎಂದು ಅವರು ತಿಳಿಸಿದ್ದಾರೆ.
ರಾಜ್ಯಗಳ ನಾಯಕರು ನೀಡಿರುವ ಮಾಹಿತಿ ಮತ್ತು ಸಮಿತಿ ನಡೆಸಿರುವ ಮೌಲ್ಯಮಾಪನದ ಕುರಿತು ಪಕ್ಷದ ಉನ್ನತ ನಾಯಕತ್ವಕ್ಕೆ ವರದಿ ನೀಡಲಾಗುವುದು ಎಂದಿದ್ದಾರೆ.
‘ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಜೊತೆ ಸಮಿತಿ ಸದಸ್ಯರು ಜನವರಿ 4ರಂದು ಸಭೆ ನಡೆಸುವರು. ಆಗ ಸಮಿತಿಯು ಈ ಸಭೆಯ ವರದಿ ಸಲ್ಲಿಸಲಿದೆ. ಉನ್ನತ ನಾಯಕತ್ವ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದರಂತೆ ಪಕ್ಷವು ಕೆಲಸ ಮಾಡಲಿದೆ’ ಎಂದು ಮೈತ್ರಿ ಸಮಿತಿ ಸಭೆ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಹೇಳಿದ್ದಾರೆ.
ಸಮಿತಿಯು ವರದಿ ನೀಡಿದ ಬಳಿಕ, ಸ್ಥಾನ ಹಂಚಿಕೆ ಕುರಿತು ಮಿತ್ರ ಪಕ್ಷಗಳ ಜೊತೆ ಕಾಂಗ್ರೆಸ್ ಪಕ್ಷವು ಮುಂದಿನ ವಾರದಿಂದಲೇ ಮಾತುಕತೆ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ನಾಯಕ ಮುಕುಲ್ ವಾಸ್ನಿಕ್ ನೇತೃತ್ವದ ಐವರು ಸದಸ್ಯರ ರಾಷ್ಟ್ರೀಯ ಮೈತ್ರಿ ಸಮಿತಿಯನ್ನು ಕಳೆದ ವಾರ ರಚಿಸಲಾಗಿದೆ. ನಾಯಕರಾದ ಅಶೋಕ್ ಗೆಹಲೋತ್, ಭೂಪೇಶ್ ಬಘೆಲ್, ಸಲ್ಮಾನ್ ಖುರ್ಷಿದ್ ಮತ್ತು ಮೋಹನ್ ಪ್ರಕಾಶ್ ಸಮಿತಿಯ ಇತರ ಸದಸ್ಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.