ADVERTISEMENT

ಕೇಂದ್ರ ಗೃಹಸಚಿವರ ಸೂಚನೆಯಂತೆ ಪಿತೂರಿ: ಕಾರ್ಯಕರ್ತರ ಹತ್ಯೆಗೆ ಮಮತಾ ಕಿಡಿ

ಗೋಲಿಬಾರ್‌ಗೆ ಶಾ ಪಿತೂರಿ: ಮಮತಾ ತಿರುಗೇಟು

ಪಿಟಿಐ
Published 10 ಏಪ್ರಿಲ್ 2021, 20:49 IST
Last Updated 10 ಏಪ್ರಿಲ್ 2021, 20:49 IST
 ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ    

ಬದುರಿಯ/ಹಿಂಗಲ್‌ಗಂಜ್‌:‘ಜನಾದೇಶ ಸಿಗದು ಎಂಬುದು ಬಿಜೆಪಿಗೆ ಗೊತ್ತಾಗಿದೆ. ಹಾಗಾಗಿ, ಆ ಪಕ್ಷವು ಜನರನ್ನು ಕೊಲ್ಲುವ ಪಿತೂರಿ ನಡೆಸಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಈ ಷಡ್ಯಂತ್ರ ಮಾಡಿದ್ದಾರೆ. ಹಾಗಾಗಿ, ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸೀತಾಲಕುಚಿ ಘಟನೆಗೆ ಸಂಬಂಧಿಸಿ ಜನರು ಶಾಂತಿ ಕಾಯ್ದುಕೊಳ್ಳಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.

ಕೇಂದ್ರೀಯ ಪಡೆಗಳು ಹೀಗೆ ವರ್ತಿಸಬಹುದು ಎಂಬ ಭೀತಿ ತಮ್ಮಲ್ಲಿ ಮೊದಲೇ ಇತ್ತು. ಆದರೆ, ಜನರು ಶಾಂತಿಯುತವಾಗಿ ಮತದಾನ ಮಾಡಬೇಕು. ಅವರನ್ನು ಸೋಲಿಸುವ ಮೂಲಕ ಈ ಸಾವಿಗೆ ಪ್ರತೀಕಾರ ತೀರಿಸಿ ಎಂದು ಮಮತಾ ಹೇಳಿದ್ದಾರೆ.

ADVERTISEMENT

ಮತದಾನಕ್ಕಾಗಿ ಸರದಿಯಲ್ಲಿ ನಿಂತಿದ್ದ ಜನರ ಮೇಲೆ ಕೇಂದ್ರೀಯ ಪಡೆಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದೂ ಅವರು ಆಪಾದಿಸಿದ್ದಾರೆ. ಭಾನುವಾರ ಮಧ್ಯಾಹ್ನ 2ರಿಂದ 4 ಗಂಟೆ ವರೆಗೆ ರಾಜ್ಯದಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ಪಕ್ಷದ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಮೂರು ವರ್ಷ ಹಿಂದೆ ನಡೆದ ಪಂಚಾಯಿತಿ ಚುನಾವಣೆಗಿಂತ ಈ ಬಾರಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಚುನಾವಣೆ ಘೋಷಣೆಯಾದಾಗಿನಿಂದ ಕೊಲೆಯಾದವರ ಲೆಕ್ಕ ಹಾಕಿದರೆ 17–18 ಮಂದಿ ಜೀವ ಕಳೆದುಕೊಂಡಿದ್ದಾರೆ. ಅವರಲ್ಲಿ 12 ಮಂದಿಯಾದರೂ ಟಿಎಂಸಿಯವರು ಇದ್ದಾರೆ ಎಂದು ಸೀತಾಲಕುಚಿ ಅವರು ಹೇಳಿದ್ದಾರೆ.

‘ಸೀತಾಲಕುಚಿಯಲ್ಲಿನ ಘಟನೆಗೆ ಚುನಾವಣಾ ಆಯೋಗ ಕೂಡ ವಿವರಣೆ ನೀಡಬೇಕು. ಏಕೆಂದರೆ, ಆಡಳಿತದ ಹೊಣೆಯು ಈಗ ನಮ್ಮ ಕೈಯಲ್ಲಿ ಇಲ್ಲ. ಅದನ್ನು ಚುನಾವಣಾ ಆಯೋಗವು ನೋಡಿಕೊಳ್ಳುತ್ತಿದೆ’ ಎಂದಿದ್ದಾರೆ.

‘ಸ್ವರಕ್ಷಣೆ’ ವರದಿಗೆ ಆಕ್ಷೇಪ:ಸ್ವರಕ್ಷಣೆಗಾಗಿ ಸಿಐಎಸ್‌ಎಫ್‌ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂಬ ವರದಿಗೆ ಮಮತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಸಿಐಡಿ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಕೇಂದ್ರೀಯ ಪಡೆಗಳ ಹೇಳಿಕೆಯನ್ನು ಸಮರ್ಥಿಸುವ ವಿಡಿಯೊ ದೃಶ್ಯಗಳಾಗಲಿ, ಬೇರೆ ಸಾಕ್ಷ್ಯಗಳಾಗಲಿ ಇಲ್ಲ. ಹಾಗಿರುವಾಗ ಸ್ವರಕ್ಷಣೆಗಾಗಿ ಗುಂಡು ಹಾರಿಸಿದರು ಎಂಬುದನ್ನು ನಂಬುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.