ADVERTISEMENT

ಭ್ರಷ್ಟಾಚಾರ ನಿರ್ಮೂಲನೆಗೆ ತಿದ್ದುಪಡಿ ಮಸೂದೆ:ವಿರೋಧ ‍ಪಕ್ಷಗಳ ಖಂಡನೆಗೆ ಮೋದಿ ಕಿಡಿ

ಪಿಟಿಐ
Published 22 ಆಗಸ್ಟ್ 2025, 9:44 IST
Last Updated 22 ಆಗಸ್ಟ್ 2025, 9:44 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಪಿಟಿಐ ಚಿತ್ರ

ಪಟ್ನಾ: ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತೊಗೆಯಲು ಮತ್ತು ನುಸುಳುಕೋರರಿಂದ ದೇಶದ ಜನಸಂಖ್ಯೆಗೆ ಎದುರಾಗಿರುವ ಬೆದರಿಕೆಯನ್ನು ನಿಭಾಯಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ವಿರೋಧಿಸುವ ಗುರಿಯನ್ನು ‘ಇಂಡಿಯಾ’ ಮೈತ್ರಿಕೂಟ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪ ಮಾಡಿದರು. 

ADVERTISEMENT

ಇತ್ತೀಚೆಗೆ ತಮ್ಮ ಸರ್ಕಾರ ಪರಿಚಯಿಸಿದ ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಮತ್ತು ಮತದಾರ ಪಟ್ಟಿಗಳ ಸಮಗ್ರ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯವನ್ನು ಮೋದಿ ಅವರು ರ್‍ಯಾಲಿಯಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿದರು.

‘ಅಧಿಕಾರದ ಉನ್ನತ ಸ್ಥಾನಗಳಲ್ಲಿ ಇರುವವರು ಜೈಲಿನಿಂದ ಸರ್ಕಾರಗಳನ್ನು ನಡೆಸಿದ ಉದಾಹರಣೆಗಳನ್ನು ನಾವು ನೋಡಿದ್ದೇವೆ’ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಉಲ್ಲೇಖಿಸಿ ಮೋದಿ ತಿಳಿಸಿದರು.

‘ನನ್ನ 11 ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರದ ಕಲೆ ಇಲ್ಲ ಎಂಬುದು ಹೆಮ್ಮೆಯ ವಿಚಾರ. ಆದರೆ ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯಿತ್ತು. ಆಗ ಅನೇಕ ಹಗರಣಗಳು ಬಯಲಾಗಿದ್ದವು. ಬಿಹಾರದಲ್ಲಂತೂ ಆರ್‌ಜೆಡಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರವು ಬೀದಿಯಲ್ಲಿರುವ ಮನುಷ್ಯರಿಗೆಲ್ಲ ತಿಳಿದಿತ್ತು’ ಎಂದು ವಿವರಿದರು.

‘ಇದಕ್ಕೆಲ್ಲ ಕಡಿವಾಣ ಹಾಕಲು ನಾವು ಕಾನೂನನ್ನು ತರಲು ನಿರ್ಧರಿಸಿದ್ದೇವೆ. ಭ್ರಷ್ಟ ಮುಖ್ಯಮಂತ್ರಿ ಅಥವಾ ಪ್ರಧಾನಿ 30 ದಿನಗಳವರೆಗೆ ಜೈಲಿನಲ್ಲಿದ್ದರೆ ಅವರು ತಮ್ಮ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ’ ಎಂದ ಅವರು, ‘ಅಲ್ಪಾವಧಿವರೆಗೆ ಜೈಲಿನಲ್ಲಿರುವ ಕೆಳಮಟ್ಟದ ಒಬ್ಬ ಗುಮಾಸ್ತನನ್ನು ಅಮಾನತಗೊಳಿಸಲಾಗುತ್ತದೆ. ಆದರೆ ಉನ್ನತ ಸ್ಥಾನದಲ್ಲಿ ಇರುವವರಿಗೇಕೆ ವಿನಾಯಿತಿ’ ಎಂದು ಅವರು ಪ್ರಶ್ನಿಸಿದರು.

‘ಈ ನಿಟ್ಟಿನಲ್ಲಿ ನಾವು ಕಾನೂನು ಮಾಡಲು ಮುಂದಾಗಿದ್ದೇವೆ. ಆದರೆ ಇದಕ್ಕೆ ಕಾಂಗ್ರೆಸ್‌, ಆರ್‌ಜೆಡಿ, ಎಡಪಂಥೀಯರು ಕೋಪಗೊಂಡಿದ್ದಾರೆ. ಅವರು ತಮ್ಮ ಪಾಪ ಕಾರ್ಯಗಳಿಗೆ ಶಿಕ್ಷೆ ಎದುರಿಸಬೇಕಾಗುತ್ತದೆಯಲ್ಲ ಎಂದು ಭಯಗೊಂಡಿದ್ದಾರೆ’ ಎಂದು ಮೋದಿ ಆರೋಪ ಮಾಡಿದರು.  

‘ಅಕ್ರಮವಾಗಿ ದೇಶದೊಳಗೆ ನುಸುಳಿರುವ ಬಾಂಗ್ಲಾದೇಶಿಗರು, ನೇಪಾಳಿಗರು, ಮ್ಯಾನ್ಮಾರ್‌ನ ಜನರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಉದ್ದೇಶವನ್ನು ಎಸ್‌ಐಆರ್‌ ಹೊಂದಿದೆ. ಆದರೆ ಇದಕ್ಕೂ ಪ್ರತಿಪಕ್ಷಗಳ ವಿರೋಧವಿದೆ’ ಎಂದು ಅವರು ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.