
ಸ್ವತಂತ್ರ ಭಾರತಕ್ಕೆ ಸಂವಿಧಾನವನ್ನು ರೂಪಿಸಲು ರಚನಾ ಸಭೆ ಸ್ಥಾಪನೆಯಾಗಿದ್ದು 1946ರಲ್ಲಿ. ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತ್ವತ್ವದಲ್ಲಿ ನೂರಾರು ಮಂದಿ ಸುಮಾರು ಮೂರು ವರ್ಷ ಶ್ರಮಿಸಿ ಸಂವಿಧಾನ ರೂಪಿಸಿದರು. ಸಂವಿಧಾನ ರಚನಾ ಸಭೆಯು 1949ರ ನ.26ರಂದು ಸಂವಿಧಾನವನ್ನು ಅಂಗೀಕರಿಸಿತು. ಸಂವಿಧಾನವನ್ನು ಸಭೆಯು ಅಂಗೀಕರಿಸಿದ ಇದೇ ದಿನವನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಸಂವಿಧಾನದ ವೈಶಿಷ್ಟ್ಯಗಳು
ಇದು ಭಾರತದ ಪರಮೋಚ್ಚ ಕಾನೂನು
ಒಕ್ಕೂಟ ವ್ಯವಸ್ಥೆಯಲ್ಲಿ ಸಂಸದೀಯ ಮಾದರಿಯ ಸರ್ಕಾರ ರಚನೆಗೆ ಸಂವಿಧಾನ ಅವಕಾಶ ನೀಡುತ್ತದೆ
1949ರ ನವೆಂಬರ್ 26ರಂದು ಅಂಗೀಕೃತಗೊಂಡು, 1950 ಜನವರಿ 26ರಂದು ಜಾರಿಗೆ ಬಂದಾಗ ಸಂವಿಧಾನವು 395 ವಿಧಿಗಳು, ಎಂಟು ಪರಿಚ್ಛೇದಗಳನ್ನು ಹೊಂದಿತ್ತು
1.45 ಲಕ್ಷ ಪದಗಳನ್ನು ಹೊಂದಿದ್ದ ಇದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂವಿಧಾನ
ಕರಡು ಸಮಿತಿ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ಸಂವಿಧಾನದ ಮುಖ್ಯ ಶಿಲ್ಪಿ
ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನಕ್ಕೆ ಸಹಿ ಹಾಕಿದ ಮೊದಲಿಗರು
ಈಗಲೂ ಇದು ಜಗತ್ತಿನ ಅತ್ಯಂತ ದೊಡ್ಡ ಸಂವಿಧಾನ. ಇದನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕೈ ಬರಹದಲ್ಲಿ ಬರೆಯಲಾಗಿದ್ದು, ಕ್ಯಾಲಿಗ್ರಫಿಯಿಂದ ಅಲಂಕೃತಗೊಂಡಿದೆ
ವ್ಯೋಹರ್ ರಾಮ್‌ಮನೋಹರ್ ಸಿನ್ಹಾ , ಪ್ರೇಮ್ ಬಿಹಾರಿ ನಾರಾಯಣ ರೈಝಾದಾ ಮತ್ತು ನಂದಲಾಲ್ ಬೋಸ್ ಸೇರಿದಂತೆ ಶಾಂತಿನಿಕೇತನ ಕಲಾವಿದರ ಚಿತ್ರಗಳು ಸಂವಿಧಾನದ ಪುಟಗಳಲ್ಲಿ ಸ್ಥಾನ ಪಡೆದಿವೆ
ಅಂತಿಮ ಕರಡನ್ನು ಪೂರ್ಣಗೊಳಿಸಲು ಎರಡು ವರ್ಷ 11 ತಿಂಗಳು ಮತ್ತು 17 ದಿನಗಳನ್ನು ತೆಗೆದುಕೊಳ್ಳಲಾಗಿತ್ತು
ಸದ್ಯ ಸಂವಿಧಾನವು 448 ವಿಧಿಗಳು, 25ವಿಭಾಗಗಳು ಮತ್ತು 12 ಪರಿಚ್ಛೇದಗಳನ್ನು ಒಳಗೊಂಡಿದೆ.
ಈವರೆಗೆ ಸಂವಿಧಾನಕ್ಕೆ 106 ಬಾರಿ ತಿದ್ದುಪಡಿ ತರಲಾಗಿದೆ
ವಿಭಿನ್ನ ಸಂವಿಧಾನ
‘ಭಾರತದ ಪ್ರಜೆಗಳಾದ ನಾವು..’ ಎಂದು ಆರಂಭವಾಗುವ ಪ್ರಸ್ತಾವನೆಯು, ಸಂವಿಧಾನದ ಆಶಯಗಳನ್ನು, ಸಾರವನ್ನು ಪ್ರತಿನಿಧಿಸುತ್ತದೆ
ದೇಶದಲ್ಲಿ ಸರ್ಕಾರ, ಆಡಳಿತ ವ್ಯವಸ್ಥೆ ಯಾವ ರೀತಿ ಇರಬೇಕು, ಅದಕ್ಕಾಗಿ ಯಾವ ರೀತಿಯ ಕಾನೂನು, ನಿಯಮಗಳು ಇರಬೇಕು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ, ಬೇರೆ ದೇಶಗಳ ಸಂವಿಧಾನಗಳಲ್ಲಿ ಸ್ಥೂಲ ಮಾರ್ಗಸೂಚಿ/ ಅಂಶಗಳು ಮಾತ್ರ ಇರುತ್ತವೆ
ಅಗತ್ಯವಿದ್ದ ಸಂದರ್ಭಗಳಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವನ್ನು ಸಂವಿಧಾನ ನೀಡಿದೆ
ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಗಳಿಗೂ ಅಧಿಕಾರ ನೀಡಿದೆ. ವಿಶೇಷ/ತುರ್ತು ಸಂದರ್ಭಗಳಲ್ಲಿ ಪೂರ್ಣ ಅಧಿಕಾರವನ್ನು ಕೇಂದ್ರಕ್ಕೆ ನೀಡುತ್ತದೆ
ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಪ್ರತ್ಯೇಕ ಜವಾಬ್ದಾರಿಗಳನ್ನು ನೀಡಿದೆ
ಶಾಸನಗಳು ಅಥವಾ ಸಂವಿಧಾನವನ್ನು ಉಲ್ಲಂಘಿಸುವ ಸರ್ಕಾರದ ಕ್ರಮಗಳನ್ನು ರದ್ದು ಮಾಡುವ ಅಧಿಕಾರವನ್ನು ಸ್ವತಂತ್ರ ನ್ಯಾಯಾಂಗಕ್ಕೆ ಕೊಟ್ಟಿದೆ
ಜಾತ್ಯತೀತ ತತ್ವ ಪ್ರತಿಪಾದಿಸುತ್ತದೆ. ತಮಗೆ ಇಷ್ಟವಾದ ಧರ್ಮವನ್ನು ಅನುಸರಿಸುವ ಹಕ್ಕನ್ನು ಪ್ರಜೆಗಳಿಗೆ ನೀಡಿದೆ
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕ ಕಾನೂನುಗಳನ್ನು ರೂಪಿಸಿದರೂ ಈ ಕಾನೂನುಗಳ ಅನುಷ್ಠಾನದ ಮೇಲುಸ್ತುವಾರಿಗೆ ವಿವಿಧ ಹಂತದ ನ್ಯಾಯಾಲಯಗಳನ್ನೊಳಗೊಂಡ ಒಂದು ಸಂಯೋಜಿತ ವ್ಯವಸ್ಥೆಗೆ ಸಂವಿಧಾನ ಅವಕಾಶ ನೀಡಿದೆ
ಪ್ರಜೆಗಳಿಗೆ ಆರು ಮೂಲಭೂತ ಹಕ್ಕುಗಳು ಮತ್ತು 11 ಮೂಲಭೂತ ಕರ್ತವ್ಯಗಳನ್ನು ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದೂ ಹೇಳಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.