ADVERTISEMENT

ಸಂವಿಧಾನ ದಿನ: ದೇಶದಾದ್ಯಂತ 2.63 ಲಕ್ಷ ಪಂಚಾಯಿತಿಗಳಿಲ್ಲಿ ಪ್ರಸ್ತಾವನೆ ಓದು

ಪಿಟಿಐ
Published 24 ನವೆಂಬರ್ 2025, 15:46 IST
Last Updated 24 ನವೆಂಬರ್ 2025, 15:46 IST
   

ನವದೆಹಲಿ: ‘ದೇಶದಾದ್ಯಂತ ಸುಮಾರು 2.63 ಲಕ್ಷ ಪಂಚಾಯಿತಿಗಳಲ್ಲಿ (ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ) ನ.26ರಂದು ಸಂವಿಧಾನ ದಿನವನ್ನು ಆಚರಿಸಲಾಗುವುದು. ಸ್ಥಳೀಯ ಭಾಷೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದಲಾಗುವುದು’ ಎಂದು ಪಂಚಾಯತ್‌ ರಾಜ್‌ ಸಚಿವಾಲಯ ಸೋಮವಾರ ಹೇಳಿದೆ.

‘ಎಲ್ಲ ಪಂಚಾಯಿತಿಗಳಲ್ಲಿ ಆಯಾ ಸ್ಥಳೀಯ ಭಾಷೆಯಲ್ಲಿ ಸಾಮೂಹಿಕವಾಗಿ ಸಂವಿಧಾನದ ಪ್ರಸ್ತಾವನೆಯನ್ನು ಓದಲಾಗುವುದು. ಸಂವಿಧಾನದ ಕುರಿತು ಚರ್ಚೆ, ವಿಚಾರಸಂಕಿರಣ ಮತ್ತು ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗುವುದು’ ಎಂದು ಸಚಿವಾಲಯ ಮಾಹಿತಿ ನೀಡಿದೆ.

‘ಸಂವಿಧಾನ ಕನೆಕ್ಟ್‌– ಪ್ರಸ್ತಾವನೆ ಓದು ಮಾಲಿಕೆ’ ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳ ತಂಡಗಳು ಈ ಮಾಲಿಕೆಯಲ್ಲಿ ಭಾಗವಹಿಸಲಿವೆ. ಪ್ರಸ್ತಾವನೆ ಓದುವ ತಂಡಗಳಿಗೆ 15 ನಿಮಿಷ ಕಾಲಾವಕಾಶ ನೀಡಲಾಗಿದೆ. ಸಚಿವಾಲಯದ ಅಧಿಕೃತ ಯೂಟ್ಯೂಬ್‌ ವಾಹಿನಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 6.45ರವರೆಗೆ ಈ ಮಾಲಿಕೆಯು ಪ್ರಸಾರವಾಗಲಿದೆ’ ಎಂದಿದೆ.

ADVERTISEMENT

‘ಎಲ್ಲ ಪಂಚಾಯಿತಿಗಳಲ್ಲಿಯೂ ಸಂವಿಧಾನ ಪ್ರಸ್ತಾವನೆ ಗೋಡೆಯನ್ನು ಕಲಾತ್ಮಕವಾಗಿ ರೂಪಿಸಲು ಸೂಚಿಸಲಾಗಿದೆ. ಯುವಕರು, ಸ್ವ–ಸಹಾಯ ಗುಂಪುಗಳು ಮತ್ತು ಜನರನ್ನು ಸೇರಿಸಿಕೊಂಡು ‘ನಮ್ಮ ಹಳ್ಳಿ, ನಮ್ಮ ಸಂವಿಧಾನ’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಬೇಕು’ ಎಂದು ಹೇಳಿದೆ.