ADVERTISEMENT

2020ರಲ್ಲಿ ನ್ಯಾಯಯುತ ಚುನಾವಣೆ ನಡೆದಿರಲಿಲ್ಲ: ತೇಜಸ್ವಿ ಯಾದವ್‌ ಆರೋಪ

ಪಿಟಿಐ
Published 8 ಜೂನ್ 2025, 14:16 IST
Last Updated 8 ಜೂನ್ 2025, 14:16 IST
ತೇಜಸ್ವಿ ಯಾದವ್‌
ತೇಜಸ್ವಿ ಯಾದವ್‌   

ಪಟ್ನಾ: ‘ಬಿಹಾರದಲ್ಲಿ 2020ರಲ್ಲಿ ವಿಧಾನಸಭೆ ಚುನಾವಣೆಯು ನ್ಯಾಯಯುತವಾಗಿ ನಡೆದಿರಲಿಲ್ಲ. ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡುವ ಮೊದಲೇ ಬಿಜೆಪಿ ಐಟಿ ಸೆಲ್‌ಗೆ ಚುನಾವಣಾ ದಿನಾಂಕ ತಿಳಿದಿರುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌ ಭಾನುವಾರ ಆರೋಪಿಸಿದರು.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮಹಾರಾಷ್ಟ್ರದಲ್ಲಿನ ಚುನಾವಣಾ ಪ್ರಕ್ರಿಯೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿ ಪತ್ರಿಕೆಗಳಿಗೆ ಇತ್ತೀಚೆಗೆ ಲೇಖನ ಬರೆದಿದ್ದರು. ಆಯೋಗದ ಕಾರ್ಯವಿಧಾನದ ಕುರಿತು ರಾಹುಲ್‌ ಅವರು ವ್ಯಕ್ತಪಡಿಸಿದ್ದ ಹಲವು ಸಂಶಯಗಳ ಬಗ್ಗೆ ತೇಜಸ್ವಿ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ.

‘2020ರಲ್ಲಿ ರಾಜ್ಯದಲ್ಲಿ ನಾವೇ ಸರ್ಕಾರ ರಚಿಸಬೇಕಿತ್ತು. ಮತ ಎಣಿಕೆ ದಿನ ಸಂಜೆ ಹೊತ್ತಿಗೆ  ಎಣಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಸಮರ್ಥನೆ ನೀಡುವುದಕ್ಕೆ ಚುನಾವಣಾ ಆಯೋಗವು ಮೂರು ಮಾಧ್ಯಮ ಗೋಷ್ಠಿಗಳನ್ನು ನಡೆಸಿತು. ಆದರೆ, ರಾತ್ರಿ ಹೊತ್ತಿಗೆ ಮತ್ತೊಮ್ಮೆ ಯಾಕಾಗಿ ಮತ ಎಣಿಕೆ ಪ್ರಕ್ರಿಯೆ ಆರಂಭಿಸಲಾಯಿತು? ಮಹಾ ಮೈತ್ರಿಕೂಟದ ಅಭ್ಯರ್ಥಿಗಳಲ್ಲಿ ಯಾರೆಲ್ಲಾ ಗೆಲುವು ಸಾಧಿಸಿದ್ದಾರೆ ಎಂದು ಆಯೋಗವೇ ಹೇಳಿತ್ತೊ, ಆ ಎಲ್ಲ ಅಭ್ಯರ್ಥಿಗಳು ಸೋತಿದ್ದಾರೆ ಎಂದು ಆಯೋಗವೇ ನಂತರ ಘೋಷಿಸಿತು’ ಎಂದರು.

ADVERTISEMENT

‘ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ಹೈಜಾಕ್‌ ಮಾಡುತ್ತಲೇ ಇದೆ. ಈ ಸಂಸ್ಥೆಗಳೇ ಸರ್ಕಾರದ ಪ್ರಭಾವಕ್ಕೆ ಒಳಗಾದರೆ, ಜನರು ನ್ಯಾಯವನ್ನು ಹೇಗೆ ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.