ADVERTISEMENT

ಸಾಂವಿಧಾನಿಕ ಕರ್ತವ್ಯವು ಸದೃಢ ಪ್ರಜಾಪ್ರಭುತ್ವದ ಅಡಿಪಾಯ: ದೇಶಕ್ಕೆ PM ಮೋದಿ ಪತ್ರ

ಪಿಟಿಐ
Published 26 ನವೆಂಬರ್ 2025, 6:34 IST
Last Updated 26 ನವೆಂಬರ್ 2025, 6:34 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ‘ಸದೃಢ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸಾಂವಿಧಾನಿಕ ಕರ್ತವ್ಯಗಳನ್ನು ನಾಗರಿಕರು ಪೂರೈಸಬೇಕು’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ADVERTISEMENT

ಸಂವಿಧಾನ ದಿನದ ಅಂಗವಾಗಿ ಇಂದು (ಬುಧವಾರ) ದೇಶದ ನಾಗರಿಕರಿಗೆ ಬಹಿರಂಗ ಪತ್ರ ಬರೆದಿರುವ ಅವರು, ‘‍ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಬೇಕೆಂದರೆ ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. 18 ವರ್ಷ ಪೂರೈಸಿದವರು ಸಂವಿಧಾನ ದಿನವನ್ನು ತಮ್ಮ ಕಾಲೇಜುಗಳಲ್ಲಿ ಆಚರಿಸಿ, ಸಂಭ್ರಮಿಸಬೇಕು’ ಎಂದಿದ್ದಾರೆ.

‘ಕರ್ತವ್ಯಗಳ ನಿರ್ವಹಣೆಯಿಂದ ಹಕ್ಕುಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ. ಕರ್ತವ್ಯಗಳನ್ನು ಪೂರೈಸುವುದು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಅಡಿಪಾಯ’ ಎಂದ ಅವರು ಹೇಳಿದ್ದಾರೆ.

ಸಂವಿಧಾನ ರಚನೆಯಲ್ಲಿ ರಾಜೇಂದ್ರ ಪ್ರಸಾದ್ ಮತ್ತು ಬಿ.ಆರ್. ಅಂಬೇಡ್ಕರ್‌ ಹಾಗೂ ಹಲವರ ಕೊಡುಗೆ ಅನನ್ಯ. ಅದರಂತೆಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಲ್ಲಭಾಬಾಯಿ ಪಟೇಲ್‌, ಬಿರ್ಸಾ ಮುಂಡಾ ಮತ್ತು ಮಹಾತ್ಮಾ ಗಾಂಧಿ ಅವರ ನಾಯಕತ್ವ ಮಹತ್ವದ್ದು.
ನರೇಂದ್ರ ಮೋದಿ, ಪ್ರಧಾನ ಮಂತ್ರಿ

‘ಈ ಮಹಾನ್ ವ್ಯಕ್ತಿಗಳು ಮತ್ತು ಅವರು ಸಾಗಿಬಂದ ಪ್ರತಿಯೊಂದು ಮೈಲಿಗಲ್ಲುಗಳು ನಮ್ಮ ಕರ್ತವ್ಯವನ್ನು ನೆನಪಿಸುತ್ತವೆ. ಸಂವಿಧಾನದ 51ಎ ವಿಧಿಯಲ್ಲಿ ಮೂಲಭೂತ ಕರ್ತವ್ಯಗಳ ಕುರಿತು ಮೀಸಲಾದ ಅಧ್ಯಾಯದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಈ ಕರ್ತವ್ಯಗಳು ಸಾಮೂಹಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಹೇಗೆ ಸಾಧಿಸುವುದು ಎಂಬುದರ ಕುರಿತು ನಮಗೆ ಮಾರ್ಗದರ್ಶನ ನೀಡುತ್ತವೆ. ಈ ಮಾತುಗಳನ್ನೇ ಮಹಾತ್ಮಾ ಗಾಂಧಿ ಅವರು ಒತ್ತಿ ಹೇಳುತ್ತಿದ್ದರು’ ಎಂದು ಮೋದಿ ಹೇಳಿದ್ದಾರೆ.

‘ಕರ್ತವ್ಯಗಳನ್ನು ಉತ್ತಮವಾಗಿ ನಿರ್ವಹಿಸಿದರೆ ಅದಕ್ಕೆ ಅನುಗುಣವಾದ ಹಕ್ಕು ಸೃಷ್ಟಿಯಾಗುತ್ತದೆ ಮತ್ತು ನಿಜವಾದ ಹಕ್ಕುಗಳು ಕರ್ತವ್ಯ ನಿರ್ವಹಣೆಯ ಫಲಿತಾಂಶವಾಗಿದೆ ಎಂದು ಗಾಂಧೀಜಿ ನಂಬಿದ್ದರು. ಇಂದು ರೂಪಿಸುವ ನೀತಿಗಳು ಮತ್ತು ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ಪೀಳಿಗೆಯ ಜೀವನವನ್ನು ರೂಪಿಸುತ್ತವೆ. 

ಎಂದು ಅವರು ಒತ್ತಿ ಹೇಳಿದರು ಮತ್ತು ಭಾರತವು ವಿಕಸಿತ್‌ ಭಾರತದ ದೃಷ್ಟಿಕೋನದತ್ತ ಸಾಗುತ್ತಿರುವಾಗ ನಾಗರಿಕರು ತಮ್ಮ ಕರ್ತವ್ಯಗಳೇ ಪರಮೋಚ್ಛ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಮ್ಮ ದೇಶ ನಮಗೆ ಬಹಳಷ್ಟು ನೀಡಿದೆ ಎಂಬ ಧನ್ಯತಾಭಾವ ನಮ್ಮ ಮನದ ಆಳದಲ್ಲಿ ಮೂಡಬೇಕು. ಈ ಭಾವನೆಯೊಂದಿಗೆ ನಾವು ಬದುಕಿದಾಗ ನಮ್ಮ ಕರ್ತವ್ಯಗಳನ್ನು ಪೂರೈಸುವುದು ನಮ್ಮ ಸ್ವಭಾವದ ಅವಿಭಾಜ್ಯ ಅಂಗವಾಗುತ್ತದೆ. ನಮ್ಮ ಕರ್ತವ್ಯಗಳನ್ನು ನಿರ್ವಹಿಸಲು, ಪ್ರತಿಯೊಂದು ಕೆಲಸದಲ್ಲೂ ನಮ್ಮ ಸಂಪೂರ್ಣ ಸಾಮರ್ಥ್ಯ ಮತ್ತು ಸಮರ್ಪಣೆ ಕಡ್ಡಾಯ’ ಎಂದಿದ್ದಾರೆ.

‘ನಮ್ಮ ಪ್ರತಿಯೊಂದು ಹೆಜ್ಜೆಯೂ ಸಂವಿಧಾನವನ್ನು ಬಲಪಡಿಸುವಂತಿರಬೇಕು. ಜತೆಗೆ ರಾಷ್ಟ್ರೀಯ ಗುರಿಗಳು ಮತ್ತು ಹಿತಾಸಕ್ತಿಗಳನ್ನು ಮತ್ತಷ್ಟು ಹೆಚ್ಚಿಸಬೇಕು. ನಮ್ಮ ಸಂವಿಧಾನದ ನಿರ್ಮಾತೃಗಳು ಕಂಡ ಕನಸುಗಳನ್ನು ನನಸಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ಈ ಕರ್ತವ್ಯ ಪ್ರಜ್ಞೆಯೊಂದಿಗೆ ಕೆಲಸ ಮಾಡಿದಾಗ ಮಾತ್ರ ನಮ್ಮ ದೇಶದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯು ಹಲವು ಪಟ್ಟು ಹೆಚ್ಚಾಗುತ್ತದೆ’ ಎಂದು ಪ್ರಧಾನಿ ಮೋದಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಸರ್ದಾರ್ ಪಟೇಲ್ ಅವರ ದೂರದೃಷ್ಟಿಯ ನಾಯಕತ್ವವು ಭಾರತದ ರಾಜಕೀಯ ಏಕೀಕರಣವನ್ನು ಖಚಿತಪಡಿಸಿತು. ಅವರ ಸ್ಫೂರ್ತಿ ಮತ್ತು ಧೈರ್ಯವೇ 370 ವಿಧಿ ಮತ್ತು 35 (ಎ) ವಿರುದ್ಧ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು. ಅದರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಸಂವಿಧಾನ ಸಂಪೂರ್ಣವಾಗಿ ಅನುಷ್ಠಾನಗೊಂಡಿದೆ. ಮಹಿಳೆಯರು ಮತ್ತು ತುಳಿತಕ್ಕೊಳಗಾದವರನ್ನೂ ಒಳಗೊಂಡು ಅಲ್ಲಿನ ಜನರಿಗೆ ಸಂವಿಧಾನದ ಎಲ್ಲಾ ಹಕ್ಕುಗಳು ದೊರೆತಿವೆ. 
ನರೇಂದ್ರ ಮೋದಿ, ಪ್ರಧಾನ ಮಂತ್ರಿ

‘ಭಗವಾನ್ ಬಿರ್ಸಾ ಮುಂಡಾ ಅವರ ಜೀವನವು ಬುಡಕಟ್ಟು ಸಮುದಾಯಗಳಿಗೆ ನ್ಯಾಯ, ಘನತೆ ಮತ್ತು ಸಬಲೀಕರಣವನ್ನು ಖಾತ್ರಿಪಡಿಸುವ ಭಾರತದ ಸಂಕಲ್ಪಕ್ಕೆ ಪ್ರೇರಣೆ ನೀಡುತ್ತಿದೆ. ದೇಶದ ನಾಗರಿಕರಾಗಿ, ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಮತ ಚಲಾಯಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಬಾರದು ಎಂಬುದೇ ನಮ್ಮ ಕರ್ತವ್ಯವಾಗಬೇಕು’ ಎಂದಿದ್ದಾರೆ.

‘ಪ್ರತಿ ವರ್ಷ ನ. 26ರಂದು ಶಾಲಾ ಮತ್ತು ಕಾಲೇಜುಗಳಲ್ಲಿ ವಿಶೇಷ ಸಮಾರಂಭವನ್ನು ಆಚರಿಸಬೇಕು. 18 ವರ್ಷ ತುಂಬಿದ ಯುವ ಸಮುದಾಯ ಈ ಆಚರಣೆಯ ಮುಖ್ಯ ಸ್ಥಾನದಲ್ಲಿರಬೇಕು. ಆ ಮೂಲಕ ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂಬುದು ನನ್ನ ಭಾವನೆ’ ಎಂದು ಹೇಳಿದ್ದಾರೆ.

‘ಅತ್ಯಂತ ಹಿಂದುಳಿದ ಕುಟುಂಬದಿಂದ ಬಂದ ನಾನು 24 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದೇನೆ ಎಂದರೆ ಅದಕ್ಕೆ ಸಂವಿಧಾನದ ಶಕ್ತಿಯೇ ಕಾರಣ. 2014ರಲ್ಲಿ ನಾನು ಮೊದಲ ಬಾರಿಗೆ ಸಂಸತ್ ಪ್ರವೇಶಿಸುವ ಮೊದಲ ಪ್ರಜಾಪ್ರಭುತ್ವದ ಶ್ರೇಷ್ಠ ದೇವಾಲಯದ ಮೆಟ್ಟಿಲುಗಳನ್ನು ಮುಟ್ಟಿ ನಮಸ್ಕರಿಸಿದ್ದ ಕ್ಷಣಗಳು ಇಂದಿಗೂ ನೆನಪಿನಲ್ಲಿದೆ’ ಎಂದು ನೆನಪಿಸಿಕೊಂಡಿದ್ದಾರೆ.

‘2019ರ ಚುನಾವಣಾ ಫಲಿತಾಂಶದ ನಂತರ ಸಂವಿಧಾನದ ಸೆಂಟ್ರಲ್‌ ಹಾಲ್ ಪ್ರವೇಶಿಸಿ ಗೌರವದ ಸಂಕೇತವಾಗಿ ಸಂವಿಧಾನಕ್ಕೆ ನಮಸ್ಕರಿಸಿ ಅದಕ್ಕೆ ಹಣೆ ಇಟ್ಟು ನಮಸ್ಕರಿಸಿದ್ದೆ. ಈ ಸಂವಿಧಾನವು ನನ್ನಂತೆಯೇ ಹಲವರಿಗೆ ಕನಸು ಕಾಣುವ ಶಕ್ತಿ ಮತ್ತು ಅದರ ಕಡೆಗೆ ಕೆಲಸ ಮಾಡುವ ಪ್ರೇರಣೆಯನ್ನು ನೀಡಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.