ADVERTISEMENT

ಸೋಂಕಿತರ ಸಂಪರ್ಕಕಕ್ಕೆ ಬಂದವರೆಲ್ಲರಿಗೂ ಕೋವಿಡ್ ಪರೀಕ್ಷೆ ಅಗತ್ಯವಿಲ್ಲ: ಐಸಿಎಂಆರ್

ಪಿಟಿಐ
Published 10 ಜನವರಿ 2022, 16:40 IST
Last Updated 10 ಜನವರಿ 2022, 16:40 IST
ಸಾಂದರ್ಭಿಕ ಚಿತ್ರ (ಕೃಪೆ – ಎಎಫ್‌ಪಿ)
ಸಾಂದರ್ಭಿಕ ಚಿತ್ರ (ಕೃಪೆ – ಎಎಫ್‌ಪಿ)   

ನವದೆಹಲಿ: ಸೋಂಕಿತರ ಸಂಪರ್ಕಕ್ಕೆ ಬಂದವರೆಲ್ಲರೂ ಕೋವಿಡ್ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ. ಆದರೆ, ಸಂಪರ್ಕಕ್ಕೆ ಬಂದವರು ವಯಸ್ಸಾದವರು ಹಾಗೂ ಇತರ ರೋಗಗಳಿಂದ ಬಳಲುತ್ತಿರುವವರಾಗಿದ್ದರೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಹೊಸ ಮಾರ್ಗಸೂಚಿ ಅನ್ವಯ ಈ ನಿರ್ಧಾರ ಪ್ರಕಟಿಸಲಾಗಿದೆ.

ಲಕ್ಷಣವಿಲ್ಲದವರು, ಹೋಂ ಐಸೋಲೇಷನ್‌ ಮಾರ್ಗದರ್ಶಿ ಪ್ರಕಾರ ಗುಣಮುಖರಾದವರು, ಕೋವಿಡ್ ಚಿಕಿತ್ಸಾ ಕೇಂದ್ರಗಳಿಂದ ಬಿಡುಗಡೆಯಾಗುತ್ತಿರುವವರು (ಪರಿಷ್ಕೃತ ಮಾರ್ಗಸೂಚಿ ಪ್ರಕಾರ), ಅಂತರರಾಜ್ಯ ಪ್ರಯಾಣಿಕರು ಕೂಡ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಿಲ್ಲ ಎಂದು ನೂತನ ಮಾರ್ಗಸೂಚಿಯಲ್ಲಿ ಐಸಿಎಂಆರ್ ತಿಳಿಸಿದೆ.

ಹೊಸ ಪರೀಕ್ಷಾ ಮಾರ್ಗಸೂಚಿಯನ್ನು ಕೇಂದ್ರದ ಹೊಸ ಹೋಂ ಐಸೋಲೇಷನ್ ನೀತಿಯ ಜತೆ ತಾಳೆಯಾಗುವಂತೆ ರೂಪಿಸಲಾಗಿದೆ. ಇದರ ಪ್ರಕಾರ, 7 ದಿನಗಳ ಹೋಂ ಐಸೊಲೇಷನ್‌ ಕೊನೆಯ ಮೂರು ದಿನಗಳಲ್ಲಿ ಜ್ವರ ಅಥವಾ ಯಾವುದೇ ಲಕ್ಷಣ ಇಲ್ಲದಿದ್ದರೆ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ.

ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭಲ್ಲೇ ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.

ಸಮುದಾಯ ಮಟ್ಟದಲ್ಲಿ ಕೂಡ ರೋಗ ಲಕ್ಷಣ (ಕೆಮ್ಮು, ಜ್ವರ, ಗಂಟಲು ಕಿರಿಕಿರಿ, ರುಚಿ–ವಾಸನೆ ಇಲ್ಲದಿರುವುದು, ಉಸಿರಾಟ ಸಮಸ್ಯೆ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು) ಇದ್ದವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿತರ ಸಂಪರ್ಕಕ್ಕೆ ಬಂದವರಾದರೆ 60 ವರ್ಷ ಮೇಲ್ಪಟ್ಟವರು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ (ಮಧುಮೇಹ, ಅಧಿಕ ರಕ್ತದೊತ್ತಡ, ದೀರ್ಘಕಾಲದ ಶ್ವಾಸಕೋಶದ ಅಥವಾ ಕಿಡ್ನಿ ಸಮಸ್ಯೆ, ಬೊಜ್ಜು ಅಥವಾ ಮಾರಣಾಂತಿಕ ಕಾಯಿಲೆ) ಬಳಲುತ್ತಿರುವವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.