ADVERTISEMENT

ನ್ಯಾಯಮೂರ್ತಿಗಳ ವಿರುದ್ಧ ಹೇಳಿಕೆ: ಯುಟ್ಯೂಬರ್‌ ವಿರುದ್ಧ SC ನ್ಯಾಯಾಂಗ ನಿಂದನೆ

ಪಿಟಿಐ
Published 30 ಮೇ 2025, 9:37 IST
Last Updated 30 ಮೇ 2025, 9:37 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಚಂಡೀಗಢ ಮೂಲದ ಪತ್ರಕರ್ತ ಹಾಗೂ ಯುಟ್ಯೂಬರ್‌ ಅಜಯ್ ಶುಕ್ಲಾ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್‌, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದೆ.

ನಿವೃತ್ತ ನ್ಯಾಯಮೂರ್ತಿ ಬೆಲಾ ಎಂ. ತ್ರಿವೇದಿ ಅವರ ವಿರುದ್ಧ ಶುಕ್ಲಾ ಅವರು ವಿಡಿಯೊವನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದರು.

ವಿವಾದಾತ್ಮಕ ವಿಡಿಯೊವನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ಇಂಥ ಮಾದರಿಯ ವಿಡಿಯೊವನ್ನು ಪಬ್ಲಿಶ್ ಮಾಡದಂತೆ ನಿರ್ಬಂಧ ಹೇರಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾ. ಅಗಸ್ಟಿನ್ ಜಾರ್ಜ್‌ ಮಾಸಿಹ್‌ ಹಾಗೂ ನ್ಯಾ. ಎ.ಎಸ್.ಚಂದೂರ್ಕರ್‌ ಅವರಿದ್ದ ಪೀಠವು ಆದೇಶಿಸಿತು. ಜತೆಗೆ ವರಪ್ರದ ಮಿಡಿಯಾದ ಮುಖ್ಯ ಸಂಪಾದಕ ಶುಕ್ಲಾಗೆ ನೋಟಿಸ್‌ ಜಾರಿ ಮಾಡಿತು.

ADVERTISEMENT

ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರು ವಾದ ಮಂಡಿಸಿ, ‘ಇದೊಂದು ಗಂಭೀರ ಪ್ರಕರಣ. ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿದ ಸುಪ್ರೀಂ ಕೋರ್ಟ್‌ನ ಕ್ರಮ ಶ್ಲಾಘನೀಯ’ ಎಂದರು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮಾತನಾಡಿ, ‘ಆರೋಪಿ ಶುಕ್ಲಾ ಅವರು  ನ್ಯಾಯಮೂರ್ತಿ ವಿರುದ್ಧ ಹಗರಣದ ಆರೋಪ ಮಾಡಿ, ಅದರ ಕುರಿತ ವಿಡಿಯೊವನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಪವಿತ್ರವಾದ ನ್ಯಾಯಾಲಯದ ಘನತೆಗೆ ಕುತ್ತು ತಂದಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಸಂವಿಧಾನವು ವಾಕ್‌ ಸ್ವಾತಂತ್ರ್ಯವನ್ನು ನಮ್ಮೆಲ್ಲರಿಗೂ ನೀಡಿದೆ. ಹಾಗೆಂದ ಮಾತ್ರಕ್ಕೆ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಲು ಬಳಸಬಾರದು. ಈ ವಿಡಿಯೊದಲ್ಲಿ ಮಾಡಿರುವ ಆರೋಪಗಳು ನ್ಯಾಯಾಂಗ ನಿಂದನೆ ಹಾಗೂ ನ್ಯಾಯಾಂಗ ವ್ಯವಸ್ಥೆ ಕುರಿತು ಅಗೌರವ ತೋರಿದಕ್ಕೆ ಸಮವಾಗಿದೆ’ ಎಂದು ನ್ಯಾ. ಬಿ.ಆರ್. ಗವಾಯಿ ಅಭಿಪ್ರಾಯಪಟ್ಟಿದ್ದಾರೆ. 

‘ಅಜಯ್ ಶುಕ್ಲಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿಕೊಳ್ಳುವಂತೆ ರಿಜಿಸ್ಟ್ರಾರ್‌ಗೆ ನಿರ್ದೇಶಿಸಲಾಗಿದೆ. ಪ್ರಕರಣದಲ್ಲಿ ಯುಟ್ಯೂಬ್ ಚಾನಲ್‌ ಅನ್ನು ಪಕ್ಷಗಾರರನ್ನಾಗಿಸಲಾಗುವುದು. ಇದಕ್ಕೆ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರು ನ್ಯಾಯಾಲಯಕ್ಕೆ ಸಹಕರಿಸಲು ಕೋರಲಾಗಿದೆ’ ಎಂದು ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.