ADVERTISEMENT

ಪರಿಣಾಮಕಾರಿ ಪೌಷ್ಟಿಕಾಂಶ ಪೂರೈಕೆಗೆ ಆರೋಗ್ಯ ಸೇವೆಗಳನ್ನು ಒಗ್ಗೂಡಿಸಿ: ತಜ್ಞರ ಸಲಹೆ

ಖ್ಯಾತ ಪೋಷಕಾಂಶ ತಜ್ಞ ಅಲೋಕ್ ರಂಜನ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 12:07 IST
Last Updated 18 ಅಕ್ಟೋಬರ್ 2020, 12:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗುಣಮಟ್ಟದ ಸೇವೆಗಳನ್ನು ಏಕೀಕೃತಗೊಳಿಸಿ, ಮನೆ ಮಟ್ಟದಲ್ಲಿ ನೀಡಲಾಗುತ್ತಿರುವ ಎಲ್ಲ ಆರೋಗ್ಯ ಸೇವೆಗಳನ್ನು ಒಗ್ಗೂಡಿಸಿ ಮತ್ತು ಆರೋಗ್ಯ ಸೇವಾ ಕ್ಷೇತ್ರದ ವಿವಿಧ ಭಾಗಗಳಿಂದ ಲಭ್ಯವಾಗುವ ದತ್ತಾಂಶಗಳನ್ನು ಕಾರ್ಯತಂತ್ರದ ಮೂಲಕ ಬಳಕೆ ಮಾಡಿದರೆ, ಭಾರತದಲ್ಲಿ ಸಾರ್ವಜನಿಕರಿಗೆ ಪೌಷ್ಟಿಕಾಂಶ ಸೇವೆಯನ್ನು ಪರಿಣಾಮಕಾರಿಯಾಗಿ ಒದಗಿಸಬಹುದು ಎಂದು ತಜ್ಞರು ಹೇಳಿದ್ದಾರೆ.

ಮಗು ಹುಟ್ಟಿದ ನಂತರದ 1000 ದಿನಗಳವರೆಗೆ(ಗರ್ಭಧರಿಸಿದಾಗಿನಿಂದ ಮೊದಲ ಎರಡು ವರ್ಷದ ಜೀವನ) ಚೆನ್ನಾಗಿ ಆರೈಕೆ ಮಾಡಬೇಕು. ಆದರೆ ಅದನ್ನು ನಿರ್ಲಕ್ಷ್ಯಿಸಲಾಗುತ್ತಿದೆ. ತಜ್ಞರ ಪ್ರಕಾರ ಈ ಸಮಯದಲ್ಲಿ ಬಾಣಂತಿಯರಲ್ಲಿ ರಕ್ತ ಹೀನತೆ ತಡೆಗಟ್ಟುವಿಕೆ, ಅತಿಸಾರ ನಿರ್ವಹಣೆ, ಪೌಷ್ಟಿಕಾಂಶ ಆಹಾರಗಳ ಪೂರೈಕೆ ಮತ್ತು ನೀರು, ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು.

‘ಪೋಷಣ್ ಮಾಸ ಅಭಿಯಾನದಲ್ಲಿ ತಾಯಿಯ ಮತ್ತು ಮಕ್ಕಳಲ್ಲಾಗುವ ಅಪೌಷ್ಟಿಕತೆಯನ್ನು ತಡೆಗಟ್ಟುವ ಮೂಲಭೂತ ವಿಷಯಗಳ ಬಗ್ಗೆ ಗಮನ ಹರಿಸುವುದಕ್ಕೆ ಒತ್ತು ನೀಡಲಾಗಿದೆ‘ ಎಂದು ಬಿಲ್‌ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್‌ನ ಖ್ಯಾತ ಪೌಷ್ಟಿಕಾಂಶ ತಜ್ಞ ಅಲೋಕ್ ರಂಜನ್‌ ಹೇಳಿದರು.

ADVERTISEMENT

‘ತೀವ್ರವಾದ ಅಪೌಷ್ಟಿಕತೆಯಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಕೈತೋಟಗಳಲ್ಲಿ ಬೆಳೆಯುವ ಸ್ಥಳೀಯ, ಪೋಷಕಾಂಶ ಭರಿತ ಆಹಾರಗಳನ್ನು ಸೇವಿಸುವಂತೆ ಉತ್ತೇಜಿಸುವ ಕುರಿತು ಈ ಅಭಿಯಾನದಲ್ಲಿ ಒತ್ತು ನೀಡಲಾಗಿದೆ‘ ಎಂದು ಹೇಳಿದರು.

ಕೆಲವು ವರ್ಷಗಳಿಂದ ಭಾರತ ಆಹಾರ ಸುರಕ್ಷತೆ ವಿಚಾರದಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಆಹಾರ ಸುರಕ್ಷತೆ ನೀಡುವ ಉತ್ಪನ್ನಗಳ ಪಟ್ಟಿಯಲ್ಲಿ ಪೋಷಕಾಂಶಯುಕ್ತ ಆಹಾರಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡಿವೆ ಎಂದು ನಾನು ಭಾವಿಸಿದ್ದೇನೆ. ಭಾರತದಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ನೀತಿ, ಮಾನವ ಸಂಪನ್ಮೂಲ, ಆರ್ಥಿಕ ನೆರವು ಮತ್ತು ರಾಜಕೀಯ ಇಚ್ಛಾಶಕ್ತಿ ಎಲ್ಲವೂ ಇವೆ. ಈಗ ಇವೆಲ್ಲವುಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ಗಮನ ಹರಿಸಬೇಕಾಗಿದೆ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.