ADVERTISEMENT

ಗೋಮೂತ್ರ, ಸಗಣಿಯಿಂದ ಕೊರೊನಾ ಸೋಂಕು ಗುಣಪಡಿಸಬಹುದು: ಬಿಜೆಪಿ ಶಾಸಕಿ

ಏಜೆನ್ಸೀಸ್
Published 3 ಮಾರ್ಚ್ 2020, 5:01 IST
Last Updated 3 ಮಾರ್ಚ್ 2020, 5:01 IST
ಅಸ್ಸಾಂ ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತಿರುವ ಬಿಜೆಪಿ ಶಾಸಕಿ ಸುಮನ್‌ ಹರಿಪ್ರಿಯಾ
ಅಸ್ಸಾಂ ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತಿರುವ ಬಿಜೆಪಿ ಶಾಸಕಿ ಸುಮನ್‌ ಹರಿಪ್ರಿಯಾ   

ಗುವಾಹಟಿ: ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೊನಾ ಸೋಂಕು ಗುಣಪಡಿಸಲು ಹಸುವಿನ ಮೂತ್ರ ಮತ್ತು ಸಗಣಿ ಸಹಾಯ ಮಾಡುತ್ತವೆ ಎಂದು ಬಿಜೆಪಿ ಶಾಸಕಿಯೊಬ್ಬರು ಹೇಳಿದ್ದಾರೆ.

ಜಗತ್ತಿನ ಸುಮಾರು 60 ದೇಶಗಳು ಕೊರೊನಾ ಭೀತಿಯಲ್ಲಿ ತಲ್ಲಣಿಸುತ್ತಿರುವ ಸಂದರ್ಭ ಅಸ್ಸಾಂ ವಿಧಾನಸಭೆ ಕಲಾಪದಲ್ಲಿ ಮಾತನಾಡಿರುವ ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ, ‘ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ಹಸು ಮೂತ್ರ ಮತ್ತು ಹಸುವಿನ ಸಗಣಿ ಸಹಾಯ ಮಾಡುತ್ತವೆ. ಹಸುವಿನ ಸಗಣಿ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಹಸುವಿನ ಮೂತ್ರ ಸಿಂಪಡಿಸುವ ಮೂಲಕ ಜಾಗವನ್ನು ಶುದ್ಧೀಕರಿಸಲಾಗುತ್ತದೆ. ಕೊರೊನಾ ಸೋಂಕು ಗುಣಪಡಿಸಲು ಗೋಮೂತ್ರ ಮತ್ತು ಸಗಣಿಯನ್ನು ಬಳಸಬಹುದು’ ಎಂದು ಅವರು ತಿಳಿಸಿದ್ದಾರೆ.

ಇಲ್ಲಿಯವರೆಗೆ ಜಗತ್ತಿನಾದ್ಯಂತ ಕೊರೊನಾ ಸೋಂಕಿನಿಂದಾಗಿ 3 ಸಾವಿರ ಮಂದಿ ಮೃತಪಟ್ಟಿದ್ದು, 89 ಸಾವಿರ ಮಂದಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.

ADVERTISEMENT

‘ಸೋಂಕು ವ್ಯಾಪಕವಾಗಿರುವ ಚೀನಾದ ಹ್ಯುಬೆ ಪ್ರಾಂತ್ಯದಲ್ಲಿ ಮತ್ತಷ್ಟು ಮಂದಿಗೆ ಸೋಂಕು ತಗುಲಿದೆ. ಭಾನುವಾರ ಇಲ್ಲಿ 42 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ’ ಎಂದು ವಿಶ್ವ ಆರೋಗ್ಯ ಆಯೋಗ ಹೇಳಿದೆ.

ಇದರೊಂದಿಗೆ ಚೀನಾ ಒಂದರಲ್ಲೇ ಸಾವಿನ ಸಂಖ್ಯೆ 2,912ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.