ADVERTISEMENT

Covid-19 India Update: ಪಂಜಾಬ್‌ನಲ್ಲಿ 23 ಶಾಸಕರಿಗೆ ಕೋವಿಡ್ ಸೋಂಕು‌ ದೃಢ

ಏಜೆನ್ಸೀಸ್
Published 26 ಆಗಸ್ಟ್ 2020, 16:23 IST
Last Updated 26 ಆಗಸ್ಟ್ 2020, 16:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪಂಜಾಬ್‌ನಲ್ಲಿ ಸಚಿವರು ಸೇರಿದಂತೆ 23 ಶಾಸಕರಿಗೆ ಕೋವಿಡ್‌–19 ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಬುಧವಾರ ತಿಳಿಸಿದ್ದಾರೆ.

ಈ ನಡುವೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್’ (Covishield) ಲಸಿಕೆಯ ಎರಡನೇ ಹಂತದ ಪ್ರಯೋಗವನ್ನು ಪುಣೆ ಮೂಲದ ‘ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ’ಬುಧವಾರ ಆರಂಭಿಸಿತು. ‘ಭಾರತಿ ವಿದ್ಯಾಪೀಠ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ’ಯಲ್ಲಿ ಪ್ರಯೋಗ ನಡೆಯುತ್ತಿದೆ.

ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 67,151 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 1,059 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯತಿಳಿಸಿದೆ.

ADVERTISEMENT

ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 32,34,475ಕ್ಕೆ ಏರಿಕೆಯಾಗಿದ್ದು, 24,67,759 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 59,449 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ದೇಶದಲ್ಲಿ 7,07,267 ಸಕ್ರಿಯ ಪ್ರಕರಣಗಳು ಇವೆ.

ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸಾಲಿನಲ್ಲಿದೆ. ಮಹಾರಾಷ್ಟ್ರದಲ್ಲಿ 6.93 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಈವರೆಗೆ 22,465 ಮಂದಿ ಮೃತಪಟ್ಟಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಆಂಧ್ರಪ್ರದೇಶದಲ್ಲಿ 3.62 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದುವರೆಗೆ 3,368 ಮಂದಿ ಸಾವಿಗೀಡಾಗಿದ್ದಾರೆ.

ರಾಜಧಾನಿ ದೆಹಲಿಯಲ್ಲಿ 1.63 ಲಕ್ಷ ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗೆ 4,313 ಮಂದಿ ಕೊನೆಯುಸಿರೆಳೆದಿದ್ದಾರೆ.ಇತ್ತ ರಾಜ್ಯದಲ್ಲಿ ಬುಧವಾರ 8 ಸಾವಿರಕ್ಕೂ ಹೆಚ್ಚುಹೊಸ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ.

ಈವರೆಗೆ ದೇಶದಲ್ಲಿ 3.7 ಕೋಟಿ ಕೊರೊನಾ ಪತ್ತೆ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.