ADVERTISEMENT

ಕೋವಿಡ್‌-19 | ಬಜೆಟ್‌ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳ ರದ್ದತಿಗೆ ಕೇಂದ್ರ ನಿರ್ಧಾರ

ಪಿಟಿಐ
Published 6 ಜೂನ್ 2020, 1:12 IST
Last Updated 6 ಜೂನ್ 2020, 1:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರದಿಂದ ಇನ್ನು ಒಂದು ವರ್ಷ ಯಾವುದೇ ಹೊಸ ಯೋಜನೆ ಇರುವುದಿಲ್ಲ. 2020–21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಕೆಲವು ಯೋಜನೆಗಳು ಕೂಡ ಅನುಷ್ಠಾನ ಆಗುವುದಿಲ್ಲ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಲೇ ಇರುವ ಈ ಸಂದರ್ಭದಲ್ಲಿ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ.

ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ಇರುವ ಸಂಪನ್ಮೂಲವನ್ನು ಅತ್ಯಂತ ಜಾಣ್ಮೆಯಿಂದ ಬಳಸಬೇಕಿದೆ. ಹಾಗಾಗಿ, ಹೊಸ ಯೋಜನೆಗಳನ್ನು ಆರಂಭಿಸಬೇಡಿ ಎಂದು ಕೇಂದ್ರದ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಹಣಕಾಸು ಸಚಿವಾಲಯವು ಸೂಚಿಸಿದೆ.

ಈ ಹಣಕಾಸು ವರ್ಷದಲ್ಲಿ ಅನುಮೋದನೆ ಆಗಿರುವ ಯೋಜನೆಗಳು ಕೂಡ ಮುಂದಿನ ಮಾರ್ಚ್‌ 31ರ ವರೆಗೆ ಅಥವಾ ಮುಂದಿನ ಆದೇಶದ ವರೆಗೆ ಅಮಾನತಿನಲ್ಲಿ ಇರುತ್ತವೆ. ಹಣಕಾಸು ಇಲಾಖೆಯು ತಾತ್ವಿಕ ಒಪ್ಪಿಗೆ ನೀಡಿದ ಯೋಜನೆಗಳಿಗೂ ಇದು ಅನ್ವಯ ಎಂದು ಕೇಂದ್ರದ ವೆಚ್ಚ ಇಲಾಖೆಯು ತಿಳಿಸಿದೆ. ಈ ಇಲಾಖೆಯು ಹಣಕಾಸು ಸಚಿವಾಲಯದ ಅಧೀನದಲ್ಲಿ ಇದೆ.

ADVERTISEMENT

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆ, ಆತ್ಮನಿರ್ಭರ ಭಾರತ ಅಭಿಯಾನದ ಪ್ಯಾಕೇಜ್‌ (ಕೋವಿಡ್‌ನಿಂದಾದ ಆರ್ಥಿಕ ಸಂಕಷ್ಟ ನಿವಾರಣೆ ಉದ್ದೇಶಕ್ಕಾಗಿ ಘೋಷಿಸಿದ ಯೋಜನೆಗಳು) ಮತ್ತು ಇತರ ಯಾವುದೇ ವಿಶೇಷ ಪ್ಯಾಕೇಜ್‌ಗಳು ಅಥವಾ ಘೋಷಣೆಗಳಿಗೆ ಮಾತ್ರ ಹಣ ಬಿಡುಗಡೆ ಆಗಲಿದೆ.

‘ಕೋವಿಡ್‌ ಪಿಡುಗಿನ ಈ ಕಾಲದಲ್ಲಿ, ಸರ್ಕಾರದ ಆರ್ಥಿಕ ಸಂಪನ್ಮೂಲಕ್ಕೆ ಇನ್ನಿಲ್ಲದ ಬೇಡಿಕೆ ಇದೆ. ಬದಲಾಗುತ್ತಿರುವ ಆದ್ಯತೆಗಳಿಗೆ ಅನುಸಾರ ಸಂಪನ್ಮೂಲವನ್ನು ಬಳಸಬೇಕಾಗುತ್ತದೆ’ ಎಂದು ವೆಚ್ಚ ಇಲಾಖೆಯು ಹೇಳಿದೆ. ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಂದ ಅನುಮೋದನೆಗಾಗಿ ಹಲವು ಪ್ರಸ್ತಾವಗಳು ಬರುತ್ತಿವೆ ಎಂದೂ ಇಲಾಖೆ ತಿಳಿಸಿದೆ.

ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳನ್ನು, 2021ರ ಮಾರ್ಚ್‌ 31 ಅಥವಾ 15ನೇ ಹಣಕಾಸು ಆಯೋಗದ ಶಿಫಾರಸು ಜಾರಿಗೆ ಬರುವ ದಿನಾಂಕ ಅದರಲ್ಲಿ ಯಾವುದು ಮೊದಲೋ ಅಲ್ಲಿವರೆಗೆ ಈಗಾಗಲೇ ವಿಸ್ತರಣೆ ಮಾಡಲಾಗಿದೆ ಎಂದು ವೆಚ್ಚ ಇಲಾಖೆ ತಿಳಿಸಿದೆ.

‘ಈಗ ನೀಡಿರುವ ಸೂಚನೆಗಳಿಗೆ ಅನುಗುಣವಾಗಿ ಇಲ್ಲದ ಯಾವುದೇ ಯೋಜನೆಗಳಿಗೆ ಹಣ ಬಿಡುಗಡೆ ಆಗುವುದಿಲ್ಲ. ಇಂತಹ ಯೋಜನೆಗಳಿಗೆ ಬಳಕೆಯಾದ ನಿಧಿಯ ಮರು ಹೊಂದಾಣಿಕೆಗೆ ಬಜೆಟ್‌ನಲ್ಲಿ ಅವಕಾಶ ಕೊಡಲಾಗುವುದಿಲ್ಲ’ ಎಂದು ಇಲಾಖೆ ಹೇಳಿದೆ.

ಯಾವುದು ರದ್ದು ಎಂಬುದು ಸ್ಪಷ್ಟವಿಲ್ಲ
ಕೇಂದ್ರದ ಯಾವೆಲ್ಲ ಯೋಜನೆಗಳು ರದ್ದಾಗಲಿವೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ, ₹500 ಕೋಟಿವರೆಗಿನ ಹೊಸ ಯೋಜನೆಗಳು ಜಾರಿ ಆಗುವುದಿಲ್ಲ ಎಂದು ಹೇಳಲಾಗಿದೆ. ಕೇಂದ್ರದ ಯೋಜನೆಗಳಲ್ಲಿ ಹಲವು ಸಣ್ಣ ಮೊತ್ತದವೇ ಆಗಿವೆ ಎಂಬುದನ್ನು 2020–21ರ ಬಜೆಟ್‌ ಹೇಳುತ್ತದೆ.

₹50 ಕೋಟಿಗಿಂತ ಕಡಿಮೆ ವೆಚ್ಚದ ಯೋಜನೆಗಳೇ 235 ಇವೆ. ಇವುಗಳಲ್ಲಿ ಬಹಳಷ್ಟು ರದ್ದಾಗಬಹುದು ಎಂದು ಕೇಂದ್ರದ ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್‌ ವಿಶ್ಲೇಷಿಸಿದ್ದಾರೆ.

ಕೃಷಿ ಇಲಾಖೆಯ ಅಡಿಯಲ್ಲಿ, ₹50 ಕೋಟಿಗಿಂತಲೂ ಕಡಿಮೆ ಅನುದಾನದ 18 ಯೋಜನೆಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ: ರಾಷ್ಟ್ರೀಯ ಕೃಷಿ ಅರಣ್ಯ ಯೋಜನೆ (₹50 ಕೋಟಿ), ಸಸಿ ರಕ್ಷಣೆ ಉಪ ಯೋಜನೆ (₹50 ಕೋಟಿ), ಕೃಷಿ ಸಹಕಾರಕ್ಕೆ ಸಮಗ್ರ ಯೋಜನೆ
(₹85 ಕೋಟಿ), ಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನ ಯೋಜನೆ (₹40 ಕೋಟಿ). ಇಂತಹ ಯೋಜನೆಗಳನ್ನು ಬೇರೆ ಯೋಜನೆಗಳಲ್ಲಿ ವಿಲೀನಗೊಳಿಸಿದರೂ ದೊಡ್ಡ ನಷ್ಟವೇನಿಲ್ಲ ಎಂಬುದು ಗರ್ಗ್‌ ಅವರ ಅಭಿಮತ.

ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಲ್ಲಿ ‘ಶ್ವೇತ ಕ್ರಾಂತಿ’ ಎಂಬ ಸಮಗ್ರ ಯೋಜನೆ ಇದೆ. ಇದರ ಅಡಿಯಲ್ಲಿ ಒಟ್ಟು ಒಂಬತ್ತು ಉಪ ಯೋಜನೆಗಳಿವೆ. ಸಮಗ್ರ ಯೋಜನೆಯ ಒಟ್ಟು ಅನುದಾನವೇ ₹2,240 ಕೋಟಿ. ಇಂತಹ ಉಪ ಯೋಜನೆಗಳು ಕೂಡ ರದ್ದಾಗಬಹುದು.

ಮುಂದುವರಿದ ವೆಚ್ಚ ಕಡಿತ: ಎಲ್ಲ ಸಚಿವಾಲಯಗಳು ಏಪ್ರಿಲ್‌–ಜೂನ್‌ ತ್ರೈಮಾಸಿಕದ ತಮ್ಮ ವೆಚ್ಚವನ್ನು ಶೇ 20ರಷ್ಟು ಕಡಿತ ಮಾಡಬೇಕು ಎಂದು ಕೇಂದ್ರವು ಈಗಾಗಲೇ ಆದೇಶ ನೀಡಿದೆ. ಅದಾದ ಬಳಿಕ, ನೌಕರರ ತುಟ್ಟಿಭತ್ಯೆ ಏರಿಕೆಯನ್ನು ಕೂಡ ಕೇಂದ್ರ ಸರ್ಕಾರ ರದ್ದು ಮಾಡಿತ್ತು.

* ₹500 ಕೋಟಿ ವರೆಗಿನ ವೆಚ್ಚದ ಯೋಜನೆಗಳ ಪಟ್ಟಿಯನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸುವಂತೆ ಇಲಾಖೆಗಳು, ಸಚಿವಾಲಯ
ಗಳಿಗೆ ಸೂಚನೆ

* ಎಲ್ಲ ಸಚಿವಾಲಯಗಳು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಮತ್ತು ಆತ್ಮನಿರ್ಭರ ಭಾರತ ಅಭಿಯಾನದ ಮೇಲೆ ಗಮನ ಕೇಂದ್ರೀಕರಿಸಲು ನಿರ್ದೇಶನ

* ಅನಿವಾರ್ಯವಾಗಿ ಕೈಗೆತ್ತಿಕೊಳ್ಳಬೇಕಾದ ಯೋಜನೆಗಳಿದ್ದರೆ ಅದಕ್ಕೆ ವೆಚ್ಚ ಇಲಾಖೆಯ ಪೂರ್ವಾನುಮತಿ ಕಡ್ಡಾಯ

**
ಹೊಸ ಯೋಜನೆಗಳನ್ನು ಸ್ಥಗಿತಗೊಳಿಸುವುದು ಸಣ್ಣ ಕೈಗಾರಿಕಾ ವಲಯದ (ಎಂಎಸ್‌ಎಂಇ) ಮೇಲೆ ಅತೀವ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ
–ಆರ್‌. ರಾಜು, ಕಾಸಿಯಾ ಅಧ್ಯಕ್ಷ

**
ಸದ್ಯದ ಸನ್ನಿವೇಶದಲ್ಲಿ ಹಳೆ ಮತ್ತು ಹೊಸ ಯೋಜನೆ ಅರೆಬರೆಗೊಳಿಸುವ ಬದಲಿಗೆ ಹೊಸ ಯೋಜನೆ ಸ್ಥಗಿತಗೊಳಿಸಿರುವುದು ಸ್ವಾಗತಾರ್ಹ
–ಜನಾರ್ದನ್‌, ಎಫ್‌ಕೆಸಿಸಿಐ ಅಧ್ಯಕ್ಷ

**
ಹೊಸ ಯೋಜನೆಗಳು ಸ್ಥಗಿತಗೊಂಡರೂ, ಹಳೆಯವು ಮುಂದುವರಿಯಲಿವೆ. ಹೀಗಾಗಿ ಉದ್ದಿಮೆ ಮೇಲೆ ಜಾಸ್ತಿ ಪರಿಣಾಮ ಕಂಡು ಬರುವ ಸಾಧ್ಯತೆ ಇಲ್ಲ.
ಜೆ. ಕ್ರಾಸ್ತಾ, ‘ಫಿಕ್ಕಿ’ ರಾಜ್ಯ ಘಟಕದ ಮಾಜಿ ಅಧ್ಯಕ್ಷ

*
ಸರ್ಕಾರದ ಬಳಿ ದುಡ್ಡೇ ಇಲ್ಲದಿರುವುದರಿಂದ ಯೋಜನೆಗಳನ್ನು ಮುಂದೂಡದೆ ಬೇರೆ ವಿಧಿಯೇ ಇಲ್ಲ.
–ಸಂಪತ್‌ ರಾಮನ್‌ ‘ಅಸೋಚಾಂ’ನ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.