ADVERTISEMENT

ದೀರ್ಘಕಾಲದ ಲಾಕ್‌ಡೌನ್‌ ನಂತರ ರೈಲು ಸಂಚಾರ ಆರಂಭ; ಮುಂಬೈಯಿಂದ ಹೊರಟಿತು ಮೊದಲ ರೈಲು

ಅಜಿತ್ ಅತ್ರಾಡಿ
Published 1 ಜೂನ್ 2020, 6:36 IST
Last Updated 1 ಜೂನ್ 2020, 6:36 IST
ಸಿಕಂದರಬಾದ್‌ನಿಂದ ಹೊರಟ ರೈಲು (ಕೃಪೆ: ಟ್ವಿಟರ್)
ಸಿಕಂದರಬಾದ್‌ನಿಂದ ಹೊರಟ ರೈಲು (ಕೃಪೆ: ಟ್ವಿಟರ್)   

ನವದೆಹಲಿ:ದೀರ್ಘಕಾಲದ ಲಾಕ್‌ಡೌನ್ ನಂತರ ಸೋಮವಾರರೈಲು ಸೇವೆ ಆರಂಭಗೊಂಡಿದೆ. 200 ರೈಲುಗಳು ಇಂದು ವೇಳಾಪಟ್ಟಿ ಅನುಸಾರ ಸಂಚರಿಸಲಿದ್ದು ಮೊದಲ ರೈಲು ಮಹಾನಗರಿ ಎಕ್ಸ್‌ಪ್ರೆಸ್ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಉತ್ತರ ಪ್ರದೇಶದ ವಾರಣಾಸಿಗೆ ಪ್ರಯಾಣ ಬೆಳೆಸಿದೆ.

ಮೊದಲ ರೈಲು 01092 ಸಿಎಸ್‌ಎಂಟಿ ಮುಂಬೈ- ವಾರಣಾಸಿ ವಿಶೇಷ ರೈಲು 2020 ಜೂನ್ 1ರಂದು 00.10ಕ್ಕೆ ಹೊರಟಿದೆ ಎಂದು ಸೆಂಟ್ರಲ್ ರೈಲ್ವೆ ಟ್ವೀಟಿಸಿದೆ.

ಮೊದಲ ದಿನವೇ ಸರಿಸುಮಾರು 1.45 ಲಕ್ಷ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ರೈಲ್ವೆ ಹೇಳಿತ್ತು. ಜೂನ್ 1ರಿಂದ 30ರವರೆಗೆ 26 ಲಕ್ಷಕ್ಕಿಂತಲೂ ಹೆಚ್ಚು ಮುಂಗಡ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಮೇ 12ರಂದು ಆರಂಭವಾದ 15 ಜೋಡಿ ವಿಶೇಷ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಮೇ.1ರಂದು ಸಂಚಾರ ಆರಂಭಿಸಿ ವಲಸೆ ಕಾರ್ಮಿಕರನ್ನು ಕರೆದೊಯ್ಯುವ ಶ್ರಮಿಕ್ ಎಕ್ಸ್‌ಪ್ರೆಸ್ ಹೊರತಾಗಿ ಈ ಪ್ರಯಾಣಿಕರ ರೈಲು ಸಂಚರಿಸಲಿದೆ.

ರೈಲ್ವೆ ಸಚಿವಾಲಯ ಮತ್ತು ಮಹಾರಾಷ್ಟ್ರ ಸರ್ಕಾರ ಪರಸ್ಪರ ಮಾತುಕತೆ ನಡೆಸಿದ್ದು, ಮಹಾರಾಷ್ಟ್ರದಿಂದ ಬರುವ ಮತ್ತು ಹೋಗುವ ವಿಶೇಷ ರೈಲುಗಳು ನಿಗದಿತ ವೇಳಾಪಟ್ಟಿಯಲ್ಲೇ ಸಂಚರಿಸಲಿದೆ ಎಂದು ರೈಲ್ವೆ ಹೇಳಿದೆ. ಹೆಚ್ಚುವರಿ ನಿಲುಗಡೆ ನೀಡಬೇಕು ಎಂದು ಮಹಾರಾಷ್ಟ್ರ ಸರ್ಕಾರ ಒತ್ತಾಯಿಸಿತ್ತು.

ರೈಲಿನಲ್ಲಿ ಜನಜಂಗುಳಿ ಇರದಂತೆ ಮಾಡಲು ಕಾಯ್ದಿರಿಸಿದ ಸೀಟು ಹೊರತುಪಡಿಸಿ ಅನ್ಯ ಪ್ರಯಾಣಿಕರು ಪ್ರಯಾಣಿಸುವಂತಿಲ್ಲ.ಜನರಲ್ ಬೋಗಿಗಳಲ್ಲಿಯೂ ಟಿಕೆಟ್ ಕಾಯ್ದಿರಿಸಬೇಕು. 200 ವಿಶೇಷ ರೈಲುಗಳಲ್ಲಿ ಪ್ರಯಾಣಿಸುವವರು ಆರ್‌ಎಸಿ/ಟಿಕೆಟ್ ದೃಢಪಡಿಸಿಕೊಂಡವರಾಗಿದ್ದಾರೆ. ಈ ರೀತಿ ಟಿಕೆಟ್ ಹೊಂದಿರುವವರಿಗೆ ಮಾತ್ರ ರೈಲು ನಿಲ್ದಾಣಕ್ಕೆ ಪ್ರವೇಶ ನೀಡಲಾಗುವುದು. ರೈಲು ಹೊರಡುವುದಕ್ಕಿಂತ 90 ನಿಮಿಷಗಳ ಮುಂಚೆ ಪ್ರಯಾಣಿಕರು ನಿಲ್ದಾಣದಲ್ಲಿರಬೇಕೆಂದು ರೈಲ್ವೆ ಇಲಾಖೆ ಸೂಚಿಸಿದೆ.

ರೈಲು ನಿಲ್ದಾಣದಲ್ಲಿಯೂ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು, ರೈಲಿನಲ್ಲಿ ಪ್ರಯಾಣಿಕರಿಗೆ ಆಹಾರ ಮತ್ತು ನೀರು ಸಿಗಲಿದೆ. ಇದಕ್ಕೆ ಹಣ ಪಾವತಿ ಮಾಡಬೇಕು. ಅದೇ ವೇಳೆ ಪ್ರಯಾಣಿಕರು ಆಹಾರ ವಸ್ತುಗಳನ್ನು ಮನೆಯಿಂದಲೇ ತರುವಂತೆ ರೈಲ್ವೆ ಇಲಾಖೆ ಹೇಳಿದೆ.

ದೇಶದಾದ್ಯಂತವಿರುವ ಪ್ರಮುಖ ನಗರಗಳನ್ನು ಈ ರೈಲು ಸಂಪರ್ಕಿಸುತ್ತಿರುವುದರಿಂದ ಪ್ರಯಾಣಿಕರು ತಮ್ಮ ಗಮ್ಯ ಸ್ಥಳವಿರುವ ರಾಜ್ಯಗಳ ಕ್ವಾರಂಟೈನ್ ನಿರ್ದೇಶನಗಳಿಗೆ ಬದ್ಧರಾಗಿರಬೇಕು ಎಂದು ರೈಲ್ವೆ ಹೇಳಿದೆ.

ಪ್ರಯಾಣಿಕರುಗಮನಿಸಬೇಕಾದ ಸಂಗತಿಗಳು
* ಪ್ಲಾಟ್‌ಫಾರಂ ಟಿಕೆಟ್‌ಗಳು ಇರುವುದಿಲ್ಲ
* ಪ್ರಯಾಣಿಕರು ಮಾಸ್ಕ್ ಧರಿಸಬೇಕು, ರೈಲು ನಿಲ್ದಾಣದಲ್ಲಿ ಅಂತರ ಕಾಯ್ದುಕೊಳ್ಳಬೇಕು.
* ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿರಬೇಕು
* ರೋಗ ಲಕ್ಷಣಗಳು ಇಲ್ಲದೇ ಇರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ
* ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೊದಿಕೆ, ಬೆಡ್‌ಶೀಟ್ ನೀಡುವುದಿಲ್ಲ. ಪ್ರಯಾಣಿಕರು ಇವುಗಳನ್ನು ಮನೆಯಿಂದಲೇ ತರಬೇಕು.
* ಹವಾನಿಯಂತ್ರಿತ ಬೋಗಿಗಳಲ್ಲಿ ಉಷ್ಣತೆ ಏರಿಸಲಾಗುವುದು.
* ರೈಲುಗಳಲ್ಲಿ ನಿಯಮಿತವಾಗಿ ಆಹಾರ ಮತ್ತು ನೀರು ಸಿಗಲಿದ್ದು, ಪ್ರಯಾಣಿಕರು ಇದಕ್ಕೆ ಹಣ ಪಾವತಿ ಮಾಡಬೇಕು.
* ರೈಲು ನಿಲ್ದಾಣಗಳಲ್ಲಿ ಸ್ಥಿರವಾಗಿದ್ದ ಅಂಗಡಿಗಳನ್ನು ತೆರೆಯಲು ಅವಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.