ADVERTISEMENT

ದೇಶದಲ್ಲಿ ಕೋವಿಡ್-19 ಸಾವಿನ ಪ್ರಮಾಣದಲ್ಲಿ ಇಳಿಕೆ: ಕೇಂದ್ರ

ಪಿಟಿಐ
Published 27 ಜುಲೈ 2020, 14:18 IST
Last Updated 27 ಜುಲೈ 2020, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ವೈರಸ್ ಸೋಂಕಿ‌ನಿಂದ ಸಂಭವಿಸುವ ಸಾವಿನ ಪ್ರಮಾಣ ದೇಶದಲ್ಲಿ ಕ್ರಮೇಣ ಕಡಿಮೆಯಾಗುತ್ತಿದೆ. ಇದು ಸದ್ಯ ಶೇ 2.28ರಷ್ಟಿದ್ದು ವಿಶ್ವದಲ್ಲೇ ಅತಿ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪತ್ತೆ ಪರೀಕ್ಷೆ, ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಿಕೆ ಇತ್ಯಾದಿಗಳಿಂದಾಗಿ ಇದು ಸಾಧ್ಯವಾಗಿದೆ. ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈವರೆಗೆ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 9 ಲಕ್ಷದ ಗಡಿ ದಾಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮೂಲದಲ್ಲೇ ಸೋಂಕು ಪತ್ತೆ ಹಚ್ಚುವುದು, ಆಸ್ಪತ್ರೆಗೆ ದಾಖಲಾದವರಿಗೆ ಉತ್ತಮ ಆರೈಕೆ ಸೇರಿದಂತೆ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಕೈಗೊಳ್ಳುತ್ತಿರುವ ಪರಿಣಾಮಕಾರಿ ಕ್ರಮಗಳಿಂದಾಗಿ ಸಾವಿನ ಸಂಖ್ಯೆ ಕಡಿಮೆಯಾಗಿದ್ದು, ಗುಣಮುಖರಾಗುತ್ತಿರುವವರೂ ಹೆಚ್ಚಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ.

ADVERTISEMENT

ದೇಶದಲ್ಲಿ ಸತತ ನಾಲ್ಕನೇ ದಿನವೂ 30 ಸಾವಿರಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಸೋಮವಾರ ಸಂಜೆಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ 31,991 ಸೋಂಕಿತರು ಚೇತರಿಸಿಕೊಂಡಿದ್ದಾರೆ. ದೇಶದಾದ್ಯಂತ ಈವರೆಗೆ 9,17,567 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಗುಣಮುಖರಾಗುವ ಪ್ರಮಾಣ ಶೇ 64ರಷ್ಟಿದೆ ಎಂದೂ ಸಚಿವಾಲಯದ ತಿಳಿಸಿದೆ.

‘ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ ಹೊಸದಾಗಿ 49,931 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 14 ಲಕ್ಷದ ಗಡಿ ದಾಟಿದೆ’ ಎಂದು ಸಚಿವಾಲಯ ಸೋಮವಾರ ಬೆಳಿಗ್ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.