ADVERTISEMENT

ಲಾಕ್‌ಡೌನ್ ವಿಸ್ತರಿಸುವ ಆಲೋಚನೆಯಿಲ್ಲ: ಕೇಂದ್ರ ಸಂಪುಟ ಕಾರ್ಯದರ್ಶಿ ಸ್ಪಷ್ಟನೆ

ಏಜೆನ್ಸೀಸ್
Published 30 ಮಾರ್ಚ್ 2020, 5:12 IST
Last Updated 30 ಮಾರ್ಚ್ 2020, 5:12 IST
ಸ್ವಗ್ರಾಮಕ್ಕೆ ಹಿಂದಿರುಗಲು ಬಸ್ಸಿಗೆ ಕಾಯುತ್ತಿರುವ ವಲಸಿಗರ ಮಕ್ಕಳು ದೆಹಲಿಯಲ್ಲಿ ರಸ್ತೆಯ ಮೇಲೆಯೇ ನಿದ್ದೆಗೆ ಜಾರಿದರು (ರಾಯಿಟರ್ಸ್ ಚಿತ್ರ).
ಸ್ವಗ್ರಾಮಕ್ಕೆ ಹಿಂದಿರುಗಲು ಬಸ್ಸಿಗೆ ಕಾಯುತ್ತಿರುವ ವಲಸಿಗರ ಮಕ್ಕಳು ದೆಹಲಿಯಲ್ಲಿ ರಸ್ತೆಯ ಮೇಲೆಯೇ ನಿದ್ದೆಗೆ ಜಾರಿದರು (ರಾಯಿಟರ್ಸ್ ಚಿತ್ರ).   

ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ದೇಶದಲ್ಲಿ ವಿಧಿಸಿರುವ21 ದಿನಗಳ ಲಾಕ್‌ಡೌನ್‌ ವಿಸ್ತರಿಸುವ ಯಾವುದೇ ಆಲೋಚನೆಯಿಲ್ಲ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ ಸ್ಪಷ್ಟಪಡಿಸಿದ್ದಾರೆ. 'ಲಾಕ್‌ಡೌನ್‌ ವಿಸ್ತರಿಸುವ ಸಾಧ್ಯತೆ ಇದೆ' ಎಂದು ಕೆಲ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು 'ದಿ ಪ್ರಿಂಟ್' ಜಾಲತಾಣದಲ್ಲಿ ಪ್ರಕಟವಾಗಿದ್ದ ಸುದ್ದಿಯ ಬಗ್ಗೆ ಪ್ರಸಾರ ಭಾರತಿಗೆ ಪ್ರತಿಕ್ರಿಯೆ ನೀಡಿರುವ ಗೌಬಾ, 'ನಮಗೆ ಅಂಥ ಯಾವ ಆಲೋಚನೆಯೂ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಸೋಮವಾರ 1000 ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿತ್ತು. ವಿಶ್ವದ ಇತರೆಡೆ ಕೋವಿಡ್-19 ಪಸರಿಸಿದ ಮಾದರಿ ಗಮನಿಸಿದರೆಈ ವಾರ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ADVERTISEMENT

ಕಳೆದ ವಾರವಷ್ಟೇ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿದ್ದ ಗೌಬಾ, ಜನವರಿ 18ರ ನಂತರವಿದೇಶದಿಂದ ಬಂದು ದೇಶದಲ್ಲಿ ಹಂಚಿಹೋಗಿರುವ 15 ಲಕ್ಷಕ್ಕೂ ಹೆಚ್ಚು ಮಂದಿಯ ಜಾಡು ಪತ್ತೆಹಚ್ಚುವಂತೆ ಸೂಚಿಸಿದ್ದರು.

ವಿವಿಧ ದೇಶಗಳಿಂದ ಭಾರತಕ್ಕೆ ಬಂದ ಒಟ್ಟು ಪ್ರಯಾಣಿಕರ ಸಂಖ್ಯೆಗೂ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಸ್ತುತ ನಿಗಾ ಇರಿಸಿರುವ ಜನರ ಸಂಖ್ಯೆಗೂ ಸಾಕಷ್ಟು ಅಂತರವಿದೆ ಎಂದು ಗೌಬಾ ಒಪ್ಪಿಕೊಂಡಿದ್ದರು.

'18ನೇ ಜನವರಿಯ ನಂತರ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಬರುತ್ತಿರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ವಲಸೆ ವಿಭಾಗದ ಅಧಿಕಾರಿಗಳು 15 ಲಕ್ಷಕ್ಕೂ ಹೆಚ್ಚು ಜನರು ದೇಶಕ್ಕೆ ಬಂದಿರುವ ಮಾಹಿತಿ ನೀಡಿದ್ದಾರೆ. ಇವರೆಲ್ಲರ ಮಾಹಿತಿಯನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.