ಕೆಮ್ಮಿನ ಸಿರಪ್
(ಪ್ರಾತಿನಿಧಿಕ ಚಿತ್ರ)
ಚೆನ್ನೈ: ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಕರಾದ ಸ್ರೆಸನ್ ಫಾರ್ಮಾ ಮತ್ತು ಚೆನ್ನೈನಲ್ಲಿರುವ ತಮಿಳುನಾಡು ಆಹಾರ ಮತ್ತು ಔಷಧ ಆಡಳಿತ (ಟಿಎನ್‌ಎಫ್‌ಡಿಎ) ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಲ್ಡ್ರಿಫ್’ ಕೆಮ್ಮಿನ ಸಿರಪ್ ಸೇವಿಸಿದ ನಂತರ ಮೂತ್ರಪಿಂಡದಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ಮಧ್ಯಪ್ರದೇಶದಲ್ಲಿ 22 ಮಕ್ಕಳು ಮೃತಪಟ್ಟಿವೆ ಎಂಬ ಆರೋಪಗಳಿವೆ. ಸಿರಪ್ ತಯಾರಕರ ವಿರುದ್ಧದ ತನಿಖೆಯ ಭಾಗವಾಗಿ ಈ ದಾಳಿ ನಡೆದಿವೆ ಎಂದು ವರದಿಯಾಗಿದೆ.
ಔಷಧೀಯ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದ ಮೂಲಭೂತ ನಿಯಮಗಳನ್ನು ತಮಿಳುನಾಡು ಆಹಾರ ಮತ್ತು ಔಷಧ ಆಡಳಿತ (ಟಿಎನ್‌ಎಫ್‌ಡಿಎ) ಇಲಾಖೆ ಪಾಲನೆ ಮಾಡದೇ ಇರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಮೂಲಗಳು ಹೇಳಿವೆ.
ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ಗೆ 2011ರಲ್ಲಿ ಕೆಮ್ಮಿನ ಸಿರಪ್ ತಯಾರಿಕೆಗೆ ಟಿಎನ್‌ಎಫ್‌ಡಿಎ ಪರವಾನಗಿ ನೀಡಿದೆ. ಕಂಪನಿಯು ಸಿರಪ್ ತಯಾರಿಕೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೊಂದಿದೆಯೇ ಎಂಬ ಬಗ್ಗೆ ಟಿಎನ್‌ಎಫ್‌ಡಿಎ ದಶಕಗಳ ಕಾಲ ಪರಿಶೀಲನೆ ನಡೆಸಿಲ್ಲ.
ರಾಷ್ಟ್ರೀಯ ಔಷಧ ಸುರಕ್ಷತಾ ನಿಯಮಗಳನ್ನು ಕಂಪನಿ ಪದೇಪದೇ ಉಲ್ಲಂಘನೆ ಮಾಡಿದೆ.
ಔಷಧೀಯ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದ ವಿಧಾನಗಳನ್ನು (ಜಿಎಂಪಿ) ಕಂಪನಿ ಅನುಸರಿಸಿಲ್ಲ ಹಾಗೂ ಕಾರ್ಖಾನೆಯ ಸ್ಥಿತಿ ಗಾಬರಿ ಮೂಡಿಸುವ ರೀತಿ ಇರುವುದು ಇತ್ತೀಚಿನ ತನಿಖೆ ವೇಳೆ ಕಂಡುಬಂದಿದೆ.
ಔಷಧ ತಯಾರಕ ಕಂಪನಿಗಳ ಕುರಿತು ಕೇಂದ್ರೀಕೃತ ದತ್ತಾಂಶ ಸಿದ್ಧಪಡಿಸಲಾಗುತ್ತಿದ್ದು, ಮಾಹಿತಿ ಒದಗಿಸುವಂತೆ ಟಿಎನ್‌ಎಫ್‌ಡಿಎ ಹಾಗೂ ಎಲ್ಲ ತಯಾರಕರಿಗೆ 2023ರ ಅಕ್ಟೋಬರ್‌ನಲ್ಲಿ ಸೂಚಿಸಲಾಗಿತ್ತು. ನಂತರ, ಪ್ರತಿ ತಿಂಗಳು ನಡೆಯುವ ಪರಿಶೀಲನಾ ಸಭೆಯಲ್ಲಿಯೂ ಜ್ಞಾಪಿಸಲಾಗಿತ್ತು. ಆದರೆ, ಸ್ರೇಸನ್ ಫಾರ್ಮಾ ಆಗಲಿ ಅಥವಾ ಟಿಎನ್‌ಎಫ್‌ಡಿಎ ಆಗಲಿ ಮಾಹಿತಿ ಒದಗಿಸಿಲ್ಲ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.