ADVERTISEMENT

ದಿನಾಂಕ ಬದಲಿಸದೇ ಸಂವಿಧಾನ ಪೀಠಿಕೆ ತಿದ್ದುಪಡಿ ಸಾಧ್ಯವೇ: ಸುಪ್ರೀಂಕೋರ್ಟ್ ಪ್ರಶ್ನೆ

ಸಮಾಜವಾದಿ, ಜಾತ್ಯತೀತ ಪದಗಳನ್ನು ತೆಗೆದುಹಾಕುವಂತೆ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 14:41 IST
Last Updated 9 ಫೆಬ್ರುವರಿ 2024, 14:41 IST
<div class="paragraphs"><p>ಸುಪ್ರೀಂ ಕೋರ್ಟ್ </p></div>

ಸುಪ್ರೀಂ ಕೋರ್ಟ್

   

ನವದೆಹಲಿ: ದಿನಾಂಕವನ್ನು ಹಾಗೆ ಉಳಿಸಿಕೊಂಡು, ಸಂವಿಧಾನದ ಪೀಠಿಕೆಯನ್ನು ತಿದ್ದುಪಡಿ ಮಾಡಲು ಸಾಧ್ಯವೇ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರಶ್ನಿಸಿದೆ.

ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಹಾಗೂ ‘ಜಾತ್ಯತೀತ’ ಪದಗಳನ್ನು ತೆಗೆದು ಹಾಕುವಂತೆ ಕೋರಿ ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಂಕರ್‌ ದತ್ತಾ ಅವರಿದ್ದ ಪೀಠ ಈ ಪ್ರಶ್ನೆ ಎತ್ತಿದೆ.

ADVERTISEMENT

‘ಪೀಠಿಕೆಯನ್ನು ತಿದ್ದುಪಡಿ ಮಾಡಲು ಸಾಧ್ಯ ಇಲ್ಲ ಎಂದೇನೂ ಅಲ್ಲ’ ಎಂದೂ ಪೀಠ ಅಭಿಪ್ರಾಯಪಟ್ಟಿದೆ.

‘1976ರಲ್ಲಿ ಸಂವಿಧಾನಕ್ಕೆ ತಂದ 42ನೇ ತಿದ್ದುಪಡಿ ಮೂಲಕ ಪೀಠಿಕೆಯನ್ನು ತಿದ್ದುಪಡಿ ಮಾಡಿ, ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳನ್ನು ಸೇರ್ಪಡೆ ಮಾಡಲಾಗಿದೆ. ಆದರೆ, ಈ ತಿದ್ದುಪಡಿಯನ್ನು ಅಳವಡಿಸಿಕೊಂಡ ದಿನಾಂಕವನ್ನು 1949ರ ನವೆಂಬರ್‌ 29 ಎಂಬುದಾಗಿಯೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ, ಈ ವಿಷಯವನ್ನು ತಾರ್ಕಿಕ ದೃಷ್ಟಿಕೋನದಿಂದ ಅವಲೋಕಿಸುವುದು ಅಗತ್ಯ’ ಎಂದು ಪೀಠ ಹೇಳಿದೆ.

‘ಇದೇ ನಾವು ಅವಲೋಕಿಸಬೇಕಿರುವ ನಿಜವಾದ ಅಂಶ’ ಎಂದು ಸುಬ್ರಮಣಿಯನ್‌ ಸ್ವಾಮಿ ಹಾಗೂ ಹಾಗೂ ಇತರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

‘ಸಮಾಜವಾದಿ ಮತ್ತು ಜಾತ್ಯತೀತ ಪದಗಳು ಮೂಲ ಸಂವಿಧಾನದಲ್ಲಿ ಇರಲಿಲ್ಲ’ ಎಂದೂ ಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ದಿನಾಂಕವನ್ನು ಹಾಗೆ ಉಳಿಸಿಕೊಂಡು ತಿದ್ದುಪಡಿ ಮಾಡಲಾಗಿರುವ ಏಕೈಕ ಪೀಠಿಕೆ ಇದೇ ಇರಬೇಕು’ ಎಂದು ಹೇಳಿತು.

‘ಪೀಠಿಕೆಯು ನಿರ್ದಿಷ್ಟ ದಿನಾಂಕವನ್ನು ಹೊಂದಿದೆ’ ಎಂದು ಅರ್ಜಿದಾರರೊಬ್ಬರ ಪರ ವಕೀಲರು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ, ‘ಇದಕ್ಕೆ ಸಂಬಂಧಸಿದ ತಿದ್ದುಪಡಿ ಕಾಯ್ದೆಯನ್ನು ತುರ್ತು ಪರಿಸ್ಥಿತಿ ವೇಳೆ (1975–77) ಅಂಗೀಕರಿಸಲಾಯಿತು’ ಎಂದು ಪ್ರತಿಕ್ರಿಯಿಸಿದರು.

ವಾದ–ಪ್ರತಿವಾದಗಳನ್ನು ಆಲಿಸಿದ ಪೀಠವು, ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿತು.

ಅರ್ಜಿದಾರರಾದ ಬಲರಾಮ್‌ ಸಿಂಗ್‌ ಹಾಗೂ ಇತರರ ಪರ ವಕೀಲ ವಿಷ್ಣುಶಂಕರ್‌ ಜೈನ್‌ ಹಾಜರಿದ್ದರು.

ಅರ್ಜಿದಾರರ ವಾದ: ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಸಮಾಜವಾದಿ ಅಥವಾ ಜಾತ್ಯತೀತ ಎಂಬ ಪರಿಕಲ್ಪನೆಗಳನ್ನು ಅಳವಡಿಸುವುದು ಸಂವಿಧಾನ ರಚನಾಕಾರರ ಉದ್ದೇಶವಾಗಿರಲಿಲ್ಲ. ಅಲ್ಲದೇ, ತಿದ್ದುಪಡಿ ಮೂಲಕ ಈ ಎರಡು ಪದಗಳನ್ನು ಪೀಠಿಕೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಇದು, ತಿದ್ದುಪಡಿಗೆ ಸಂಬಂಧಿಸಿ ಸಂವಿಧಾನದ 368ನೇ ವಿಧಿಯಡಿ ಸಂಸತ್‌ ಹೊಂದಿರುವ ಅಧಿಕಾರ ವ್ಯಾಪ್ತಿಯನ್ನು ಮೀರಿ ಕೈಗೊಂಡ ಕ್ರಮವಾಗಿದೆ ಎಂದು ಅರ್ಜಿದಾರರ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.