ADVERTISEMENT

ಜ್ಞಾನವಾಪಿ ಮಸೀದಿ ಒಳಗೆ ಸಮೀಕ್ಷೆ ವಿಡಿಯೊ ಚಿತ್ರೀಕರಣ: ಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 13 ಮೇ 2022, 6:22 IST
Last Updated 13 ಮೇ 2022, 6:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ:ಉತ್ತರ ಪ್ರದೇಶದಲ್ಲಿ ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯ ಒಳಗೆ ಸಮೀಕ್ಷೆ, ವಿಡಿಯೊ ಚಿತ್ರೀಕರಣ ಮುಂದುವರಿಯಲಿದೆ ಎಂದು ವಾರಾಣಸಿಯ ಸ್ಥಳೀಯ ನ್ಯಾಯಾಲಯ ಹೇಳಿದೆ.

ಮಸೀದಿ ಸ್ಥಳದ ಸಮೀಕ್ಷೆ ಮತ್ತು ವಿಡಿಯೊ ಚಿತ್ರೀಕರಣ ನಿಲ್ಲಿಸಲು ಆದೇಶಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಕೋರ್ಟ್‌ ತಳ್ಳಿಹಾಕಿತು.

ಮೇ 17ರೊಳಗೆ ಸಮೀಕ್ಷೆ ಮುಗಿಸಿ, ವರದಿ ಸಲ್ಲಿಸಬೇಕು ಎಂದೂ ಆದೇಶಿಸಿತು.ಕೆಳಮಹಡಿ, ಮುಚ್ಚಿದ ಕೊಠಡಿಗಳು ಸೇರಿ ಸಂಪೂರ್ಣವಾಗಿ ಸಮೀಕ್ಷೆ ಕಾರ್ಯ ನಡೆಯಬೇಕು ಎಂದು ಕೋರ್ಟ್‌ ಆದೇಶಿಸಿತು.

ADVERTISEMENT

ಅಜಯ್‌ ಕುಮಾರ್ ಮಿಶ್ರಾ ಅವರನ್ನು ಅಡ್ವೊಕೇಟ್‌ ಕಮಿಷನರ್‌ ಸ್ಥಾನದಿಂದ ಕೈಬಿಡಬೇಕು ಎಂದು ಕೋರಿದ್ದ ಮುಸಲ್ಮಾನರ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿತು. ಅಲ್ಲದೆ, ಮಿಶ್ರಾ ಅವರಿಗೆ ನೆರವಾಗಲು ಹೆಚ್ಚುವರಿ ಕಮಿಷನರ್ ಮತ್ತು ಸಹಾಯಕ ಕಮಿಷನರ್‌ ಅವರನ್ನು ಕೋರ್ಟ್ ನೇಮಕ ಮಾಡಿತು.

ಸಮೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮುಸಲ್ಮಾನ ಸಂಘಟನೆಗಳು ಯಾವುದೇ ಕೋರ್ಟ್ ಆದೇಶವಿರದಿದ್ದರೂ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದವು.

ಕಾಶಿ ವಿಶ್ವನಾಥ ದೇವಸ್ಥಾನ –ಜ್ಞಾನವಾಪಿ ಮಸೀದಿ ಆವರಣದಲ್ಲಿಯೇ ಇರುವ ಶೃಂಗಾರ ಗೌರಿ ದೇವಸ್ಥಾನದಲ್ಲಿ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಆಧರಿಸಿ ಈಗ ಕೋರ್ಟ್‌ ಮಸೀದಿ ಒಳಗೆ ಸಮೀಕ್ಷೆ ಮತ್ತು ವಿಡಿಯೊಗ್ರಫಿ ನಡೆಸಲು ಆದೇಶಿಸಿದೆ.

ಮತ್ತೊಬ್ಬ ಅರ್ಜಿದಾರ ವಿಜಯ್‌ ಶಂಕರ್‌ ರಸ್ತೋಗಿ ಅವರು, ಮಸೀದಿ ಸ್ಥಳ ಸೇರಿದಂತೆ ಇಡೀ ಆವರಣ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಸೇರಿದ್ದಾಗಿದೆ ಎಂದು ವಾದಿಸಿದ್ದು, ಈ ಅರ್ಜಿಯು 1991ರಿಂದ ಕೋರ್ಟ್‌ನಲ್ಲಿದೆ.

ಕಾಶಿ ವಿಶ್ವನಾಥ ದೇವಸ್ಥಾನವನ್ನು ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈ ದೇವಸ್ಥಾನವನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆಡಳಿತದಲ್ಲಿ ನೆಲಸಮಗೊಳಿಸಲಾಗಿದೆ ಎಂದು ರಸ್ತೋಗಿ ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.