ನವದೆಹಲಿ: ಮಧ್ಯಸ್ಥಿಕೆ ಮತ್ತು ರಾಜೀಸಂಧಾನ ಕಾಯ್ದೆ–1996ರ ಅಡಿಯಲ್ಲಿ ನ್ಯಾಯಾಲಯಗಳು ಮಧ್ಯಸ್ಥಿಕೆ ತೀರ್ಪುಗಳನ್ನು ಬದಲಾಯಿಸಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದೆ.
1996ರ ಕಾಯ್ದೆಯ ಅಡಿಯಲ್ಲಿ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, ಮಧ್ಯಸ್ಥಿಕೆ ತೀರ್ಪುಗಳಲ್ಲಿ ನ್ಯಾಯಾಲಯ ಬದಲಾವಣೆ ತರಬಹುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ನೇತೃತ್ವದ ಪೀಠವು ಬಹುಮತದ ತೀರ್ಪಿನಲ್ಲಿ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸಂಜಯ್ ಕುಮಾರ್, ಆಗಸ್ಟೀನ್ ಜಾರ್ಜ್ ಮಸೀಹ್, ಕೆ.ವಿ. ವಿಶ್ವನಾಥನ್ ಅವರೂ ಈ ಪೀಠದಲ್ಲಿ ಇದ್ದರು. ನ್ಯಾಯಮೂರ್ತಿ ವಿಶ್ವನಾಥನ್ ಅವರು ಮಾತ್ರ ಭಿನ್ನ ತೀರ್ಪು ಬರೆದಿದ್ದು, ಮಧ್ಯಸ್ಥಿಕೆ ತೀರ್ಪುಗಳನ್ನು ನ್ಯಾಯಾಲಯಗಳು ಬದಲಾಯಿಸುವಂತಿಲ್ಲ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪು ವಾಣಿಜ್ಯ ವಿಚಾರಗಳಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ದೇಶದ ಹಾಗೂ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಗಳು ನೀಡಿದ ತೀರ್ಪುಗಳ ಮೇಲೆ ಪರಿಣಾಮ ಬೀರಲಿದೆ.
ತೀರ್ಪು ಪ್ರಕಟಿಸಿದ ಸಿಜೆಐ ಅವರು, ಮಧ್ಯಸ್ಥಿಕೆ ಕೇಂದ್ರಗಳು ನೀಡಿದ ತೀರ್ಪುಗಳಲ್ಲಿ ಬದಲಾವಣೆ ತರುವಾಗ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು ಎಂಬ ಕಿವಿಮಾತು ಹೇಳಿದ್ದಾರೆ.
‘ಸಂವಿಧಾನದ 142ನೆಯ ವಿಧಿಯು ಸುಪ್ರೀಂ ಕೋರ್ಟ್‌ಗೆ ನೀಡಿರುವ ವಿಶೇಷ ಅಧಿಕಾರವನ್ನು ಬಳಸಿ ಮಧ್ಯಸ್ಥಿಕೆ ಕೇಂದ್ರಗಳ ತೀರ್ಪುಗಳಲ್ಲಿ ಬದಲಾವಣೆ ತರಬಹುದು. ಆದರೆ ಈ ಅಧಿಕಾರವನ್ನು ಸಂವಿಧಾನದ ಚೌಕಟ್ಟಿನ ಒಳಗೆ ಬಹಳ ಎಚ್ಚರಿಕೆಯಿಂದ ಬಳಸಬೇಕು’ ಎಂದು ಸಿಜೆಐ ಖನ್ನಾ ಸ್ಪಷ್ಟಪಡಿಸಿದ್ದಾರೆ.
‘ಮಧ್ಯಸ್ಥಿಕೆ ಮತ್ತು ರಾಜೀಸಂಧಾನ ಕಾಯ್ದೆಯ ಸೆಕ್ಷನ್ 34 ಹಾಗೂ 37ರ ಅಡಿಯಲ್ಲಿ, ಮಧ್ಯಸ್ಥಿಕೆ ಕೇಂದ್ರದ ತೀರ್ಪು ಬದಲಾವಣೆ ಮಾಡಲು ನ್ಯಾಯಾಲಯಗಳಿಗೆ ಸೀಮಿತ ಅಧಿಕಾರ ಇದೆ’ ಎಂದು ಸಿಜೆಐ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.