ನವದೆಹಲಿ: ಬಡ್ಡಿಯ ಪ್ರಮಾಣ ಎಷ್ಟಿರಬೇಕು, ಅದನ್ನು ತಕರಾರು ಅರ್ಜಿ ಸಲ್ಲಿಸಿದ ದಿನದಿಂದ ಪಾವತಿಸಬೇಕೇ, ಅದಕ್ಕೂ ಮೊದಲಿನ ದಿನಾಂಕದಿಂದ ಪಾವತಿಸಬೇಕೇ ಅಥವಾ ನ್ಯಾಯಾಲಯದ ಆದೇಶ ಬಂದ ದಿನದಿಂದ ಪಾವತಿಸಬೇಕೇ ಎಂಬುದನ್ನು ಹೇಳುವ ಅಧಿಕಾರವು ನ್ಯಾಯಾಲಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರು ಇರುವ ವಿಭಾಗೀಯ ಪೀಠವು ತೀರ್ಪೊಂದರಲ್ಲಿ ಈ ಮಾತು ಹೇಳಿದೆ. ರಾಜ್ಯ ಸರ್ಕಾರಕ್ಕೆ ವರ್ಗಾವಣೆ ಮಾಡಿದ ಷೇರುಗಳ ಮೌಲ್ಯನಿಗದಿಯ ವಿಚಾರವಾಗಿ ರಾಜಸ್ಥಾನ ಸರ್ಕಾರ ಹಾಗೂ ಐ.ಕೆ. ಮರ್ಚಂಟ್ಸ್ ಪ್ರೈ.ಲಿ. ಸೇರಿದಂತೆ ಕೆಲವು ಖಾಸಗಿ ಕಂಪನಿಗಳ ನಡುವಿನ 52 ವರ್ಷಗಳ ಕಾನೂನು ಸಮರವನ್ನು ಈ ತೀರ್ಪು ಅಂತ್ಯಗೊಳಿಸಿದೆ.
ಕಲ್ಕತ್ತ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಐ.ಕೆ. ಮರ್ಚಂಟ್ಸ್ ಕಂಪನಿಯು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಷೇರು ಮೌಲ್ಯ ₹640 ಎಂದು ನಿರ್ಧರಿಸಿದ್ದನ್ನು ಹೈಕೋರ್ಟ್ ಮಾನ್ಯ ಮಾಡಿತ್ತು. ಅಲ್ಲದೆ, ವಾರ್ಷಿಕ ಶೇ 5ರ ಸರಳ ಬಡ್ಡಿ ಲೆಕ್ಕದಲ್ಲಿ ಹಣ ಪಾವತಿಸಬೇಕು ಎಂದು ಹೇಳಿತ್ತು.
ಈ ಆದೇಶವು ಖಾಸಗಿ ಕಂಪನಿಗೆ ಸಮಾಧಾನ ತಂದಿರಲಿಲ್ಲ. ಬಡ್ಡಿಯನ್ನು ಹೆಚ್ಚಿಸಬೇಕು ಎಂದು ಅದು ಕೋರಿತ್ತು. ಈ ನಡುವೆ, ರಾಜಸ್ಥಾನ ಸರ್ಕಾರವು ಷೇರು ಮೌಲ್ಯ ನಿಗದಿಯನ್ನು ಪ್ರಶ್ನಿಸಿತ್ತು.
ರಾಜಸ್ಥಾನ ರಾಜ್ಯ ಗಣಿ ಮತ್ತು ಖನಿಜ ನಿಯಮಿತದ ಷೇರುಗಳನ್ನು ಐ.ಕೆ. ಮರ್ಚಂಟ್ಸ್ ಕಂಪನಿಯು ರಾಜಸ್ಥಾನ ಸರ್ಕಾರಕ್ಕೆ 1973ರಲ್ಲಿ ವರ್ಗಾವಣೆ ಮಾಡಿದಾಗಿನಿಂದ ಈ ತಕರಾರು ಶುರುವಾಗಿತ್ತು. ಷೇರು ಮೌಲ್ಯವನ್ನು ಇನ್ನಷ್ಟು ಹೆಚ್ಚು ಮಾಡಬೇಕು ಎಂಬ ಕೋರಿಕೆಯೊಂದಿಗೆ ಕಂಪನಿಯು 1978ರಲ್ಲಿ ಅರ್ಜಿ ಸಲ್ಲಿಸಿತ್ತು.
ಹಲವು ಬಾರಿ ಷೇರು ಮೌಲ್ಯ ಅಂದಾಜು ಮಾಡಲಾಯಿತು. 2019ರಲ್ಲಿ ರೇ ಆ್ಯಂಡ್ ರೇ ಸಂಸ್ಥೆಯು ಷೇರು ಮೌಲ್ಯವವನ್ನು ₹640 ಎಂದು ನಿಗದಿ ಮಾಡಿತು. ದೀರ್ಘ ಕಾನೂನು ಸಮರದ ನಂತರ ಹೈಕೋರ್ಟ್, ಪ್ರತಿ ಷೇರಿಗೆ ₹640ರಂತೆ, ವಾರ್ಷಿಕ ಸರಳ ಬಡ್ಡಿ ಶೇ 5ರಷ್ಟು ಲೆಕ್ಕ ಹಾಕಿ ಪಾವತಿಸಬೇಕು ಎಂದು ಹೇಳಿತು.
ಆದರೆ, ಹೆಚ್ಚಿನ ಪರಿಹಾರ ಸಿಗಬೇಕು ಎಂದು ಕಂಪನಿಯು ಮೇಲ್ಮನವಿ ಸಲ್ಲಿಸಿತ್ತು. ಪಾವತಿಯನ್ನು ಸ್ವೀಕರಿಸುವಲ್ಲಿ ಆಗಿರುವ ಅಸಾಮಾನ್ಯ ವಿಳಂಬವನ್ನು ಗಮನಿಸಿದ ಸುಪ್ರೀಂ ಕೋರ್ಟ್, 1975ರಿಂದ ಅನ್ವಯವಾಗುವಂತೆ ಸರಳ ಬಡ್ಡಿ ಶೇ 6ರ ಲೆಕ್ಕಾಚಾರದಲ್ಲಿ ಹಣ ಪಾವತಿಸಬೇಕು ಎಂದು ತೀರ್ಪಿನಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.