ನವದೆಹಲಿ: ದೆಹಲಿಯಲ್ಲಿ ಕೋವಿಡ್–19 ಏರುಗತಿಯಲ್ಲಿದ್ದು, ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಆಸ್ಪತ್ರೆಗೆ ದಾಖಲಾಗುತ್ತಿರುವವರ ಪೈಕಿ ಶೇ 90ರಷ್ಟು ಮಂದಿ ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದವರು. ಶೇ 10ರಷ್ಟು ಮಂದಿ ಮುನ್ನೆಚ್ಚರಿಕಾ ಡೋಸ್ ಪಡೆದವರು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ತಿಳಿಸಿದ್ದಾರೆ.
‘ಮುನ್ನೆಚ್ಚರಿಕಾ ಡೋಸ್ ಪಡೆದವರು ಇತರರಿಗಿಂತ ಹೆಚ್ಚು ಸುರಕ್ಷಿತ ಎಂಬುದನ್ನು ಕಂಡುಕೊಳ್ಳಲಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಲಸಿಕಾ ಡೋಸ್ ನೀಡುವ ಕಾರ್ಯ ಚುರುಕುಗೊಳಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ತಾಸಿನಲ್ಲಿ 1,227 ಜನರಲ್ಲಿ ಹೊಸದಾಗಿ ಕೋವಿಡ್–19 ದೃಢಪಟ್ಟಿದ್ದು, ಎಂಟು ಜನರು ಮೃತಪಟ್ಟಿದ್ದಾರೆ. ಕಳೆದ 12 ದಿನಗಳಲ್ಲಿ ನಿತ್ಯ 2000ಕ್ಕೂ ಹೆಚ್ಚು ಹೊಸ ಪ್ರಕರಣಗಳು ದೆಹಲಿಯಲ್ಲಿ ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಕೋವಿಡ್ ಪ್ರಕರಣಗಳ ಪಾಸಿಟಿವಿಟಿ ದರವೂ ಹೆಚ್ಚಾಗುತ್ತಿದ್ದು, ಹಿಂದೆ ಸೋಂಕಿಗೆ ತುತ್ತಾದವರು ಮತ್ತೆ ಸೋಂಕಿಗೆ ತುತ್ತಾಗುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹೋಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ’ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.