ADVERTISEMENT

ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ನಿಷೇಧ ಮಾರ್ಚ್ 31ರ ವರೆಗೆ ವಿಸ್ತರಣೆ

ಪಿಟಿಐ
Published 27 ಫೆಬ್ರುವರಿ 2021, 3:46 IST
Last Updated 27 ಫೆಬ್ರುವರಿ 2021, 3:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ನಿಷೇಧವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಾರ್ಚ್ 31ರ ವರೆಗೆ ವಿಸ್ತರಿಸಿದೆ.

ಕೋವಿಡ್–19 ಸಾಂಕ್ರಾಮಿಕದ ಕಾರಣ ಕಳೆದ ವರ್ಷ ಮಾರ್ಚ್‌ 23ರಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಡಿಜಿಸಿಎ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು, ನಿಷೇಧ ಮುಂದುವರಿಸಲಾಗಿದೆ ಎಂದಿದೆ.

ಆದಾಗ್ಯೂ, ಆಯ್ದ ಮಾರ್ಗಗಳಲ್ಲಿ ನಿಗದಿತ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಡಿಜಿಸಿಎ ತಿಳಿಸಿದೆ.

ಸರಕುಸಾಗಣೆ ವಿಮಾನಗಳು ಮತ್ತು ವಿಶೇಷ ವಿಮಾನಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದೂ ಉಲ್ಲೇಖಿಸಲಾಗಿದೆ.

ನಿಷೇಧದ ಹೊರತಾಗಿಯೂ ‘ವಂದೇ ಭಾರತ್ ಮಿಷನ್’ ಅಡಿ ವಿಶೇಷ ವಿಮಾನಗಳ ಸಂಚಾರಕ್ಕೆ ಕಳೆದ ವರ್ಷ ಮೇ ತಿಂಗಳಿನಿಂದಲೇ ಅನುಮಮತಿ ನೀಡಲಾಗುತ್ತಿದೆ. ಆಯ್ದ ದೇಶಗಳಿಗೆ ದ್ವಿಪಕ್ಷೀಯ ವೈಮಾನಿಕ ಒಪ್ಪಂದದ (ಏರ್‌ ಬಬಲ್ ಪ್ಯಾಕ್ಟ್) ಆಧಾರದಲ್ಲಿ ಜುಲೈನಿಂದ ವಿಶೇಷ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ.

ಅಮೆರಿಕ, ಬ್ರಿಟನ್, ಯುಎಇ, ಕೀನ್ಯಾ, ಭೂತಾನ್, ಫ್ರಾನ್ಸ್‌ ಹಾಗೂ ಇತರ ಕೆಲವು ದೇಶಗಳ ಜತೆ ಭಾರತವು ದ್ವಿಪಕ್ಷೀಯ ವೈಮಾನಿಕ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅಡಿ ಆಯಾ ದೇಶಗಳ ವಿಮಾನಯಾನ ಕಂಪನಿಗಳಿಗೆ ಆಯಾ ದೇಶಗಳಲ್ಲಿ ವಿಶೇಷ ವಿಮಾನಗಳ ಸಂಚಾರಕ್ಕೆ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.