ADVERTISEMENT

ಗೋವಾ: ನ.1 ರಿಂದ ಕ್ಯಾಸಿನೊಗಳು ಪುನರಾರಂಭ

ಪಿಟಿಐ
Published 28 ಅಕ್ಟೋಬರ್ 2020, 10:38 IST
Last Updated 28 ಅಕ್ಟೋಬರ್ 2020, 10:38 IST
ಪ್ರಮೋದ್‌ ಸಾವಂತ್‌
ಪ್ರಮೋದ್‌ ಸಾವಂತ್‌   

ಪಣಜಿ: ಕ್ಯಾಸಿನೊಗಳನ್ನು ನ.1 ರಿಂದ ಮತ್ತೆ ಆರಂಭಿಸಲು ಗೋವಾ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ.

ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆ ಕಾರಣಕ್ಕೆ ಮಾರ್ಚ್‌ ತಿಂಗಳಿನಿಂದ ಈ ಕ್ಯಾಸಿನೊಗಳನ್ನು ಮುಚ್ಚಲಾಗಿತ್ತು. ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಕ್ಯಾಸಿನೊಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು,‘ ಕೋವಿಡ್‌ ಮಾರ್ಗಸೂಚಿಗಳಡಿ ನ.1 ರಿಂದ ಕ್ಯಾಸಿನೊಗಳನ್ನು ತೆರೆಯಲು ಅನುಮತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದರು.

ADVERTISEMENT

‘ಕ್ಯಾಸಿನೊಗಳಲ್ಲಿ ಸಾಮರ್ಥ್ಯಕ್ಕಿಂತ ಶೇಕಡ 50 ರಷ್ಟು ಜನರು ಮಾತ್ರ ಇರಬೇಕು. ಅಲ್ಲದೆ ರಾಜ್ಯ ಗೃಹ ಇಲಾಖೆ ನಿಗದಿಪಡಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಕ್ಯಾಸಿನೊಗಳು ಮತ್ತೆ ತೆರೆಯುವುದಕ್ಕೂ ಮುನ್ನ ಸರ್ಕಾರಕ್ಕೆ ಪರವಾನಗಿ ಶುಲ್ಕವನ್ನು ಪಾವತಿಸಬೇಕು’ ಎಂದು ಹೇಳಿದರು.

ಗೋವಾ ಸರ್ಕಾರವು ಅನ್‌ಲಾಕ್‌ ಪ್ರಕ್ರಿಯೆಯಡಿ ಹಲವು ವಾಣಿಜ್ಯ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಮತಿ ನೀಡಿದ್ದು, ರಾಜ್ಯದ ಆರ್ಥಿಕತೆಯನ್ನು ಮತ್ತೆ ಸರಿ ದಾರಿಗೆ ತರಲು ಪ್ರಯತ್ನಿಸುತ್ತಿದೆ.

ಪ್ರವಾಸೋದ್ಯಮವೇ ಗೋವಾ ರಾಜ್ಯಕ್ಕೆ ಪ್ರಮುಖ ಆದಾಯವಾಗಿದೆ. ಹೀಗಾಗಿ, ಮತ್ತೆ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನಗಳನ್ನು ಸರ್ಕಾರ ಹಂತ ಹಂತವಾಗಿ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.