ADVERTISEMENT

ಒಂದೇ ದಿನ 70 ಲಕ್ಷ ಡೋಸ್ ಕೋವಿಡ್ ಲಸಿಕೆ ಉಚಿತ ವಿತರಣೆ: ಕೇಂದ್ರ

ಪಿಟಿಐ
Published 21 ಜೂನ್ 2021, 14:59 IST
Last Updated 21 ಜೂನ್ 2021, 14:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪರಿಷ್ಕೃತ ಮಾರ್ಗಸೂಚಿ ಅಸ್ತಿತ್ವಕ್ಕೆ ಬಂದ ಮೊದಲ ದಿನವೇ, ಸೋಮವಾರ ಸಂಜೆ ವೇಳೆಗೆ 70 ಲಕ್ಷಕ್ಕೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ಉಚಿತವಾಗಿ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಜನವರಿ 16ರಂದು ಲಸಿಕೆ ಅಭಿಯಾನ ಆರಂಭವಾದ ಬಳಿಕ ಈವರೆಗೆ ದಿನವೊಂದರಲ್ಲಿ ನೀಡಲಾದ ಗರಿಷ್ಠ ಪ್ರಮಾಣ ಇದಾಗಿದೆ. ಒಟ್ಟು ಲಸಿಕೆ ನೀಡಿಕೆ 28.7 ಕೋಟಿಗೆ ತಲುಪಿದೆ ಎಂದು ಸಚಿವಾಲಯ ಹೇಳಿದೆ.

‘ಎಲ್ಲರಿಗೂ ಉಚಿತ ಲಸಿಕೆ ಅಭಿಯಾನವನ್ನು ಕೇಂದ್ರ ಸರ್ಕಾರವು ಇಂದು ಆರಂಭಿಸಿದೆ. ಬಡವರು, ಮಧ್ಯಮ ವರ್ಗ ಮತ್ತು ಯುವಕರು ಈ ಅಭಿಯಾನದ ಅತಿದೊಡ್ಡ ಫಲಾನುಭವಿಗಳಾಗಿರಲಿದ್ದಾರೆ. ನಾವೆಲ್ಲರೂ ಲಸಿಕೆ ಪಡೆಯುವುದಾಗಿ ಪ್ರತಿಜ್ಞೆ ಮಾಡಬೇಕು. ನಾವೆಲ್ಲ ಜತೆಯಾಗಿ ಕೋವಿಡ್‌ ಅನ್ನು ಸೋಲಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪರಿಷ್ಕೃತ ಲಸಿಕೆ ಮಾರ್ಗಸೂಚಿ ಪ್ರಕಾರ, ಕೇಂದ್ರ ಸರ್ಕಾರವೇ ಲಸಿಕೆಯ ಡೋಸ್‌ಗಳನ್ನು ಉಚಿತವಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಿದೆ. ಜನಸಂಖ್ಯೆ, ಸೋಂಕಿನ ತೀವ್ರತೆ, ಲಸಿಕೆ ನೀಡಿಕೆಯ ಪ್ರಗತಿಯ ಆಧಾರದಲ್ಲಿ ಲಸಿಕೆಯನ್ನು ವಿತರಣೆ ಮಾಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಉಚಿತ ಲಸಿಕೆಗೆ ಅರ್ಹರಾಗಿದ್ದಾರೆ.

ಲಸಿಕೆ ವ್ಯರ್ಥವಾದರೆ ಅದು ಹಂಚಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದೂ ಕೇಂದ್ರ ಹೇಳಿದೆ.

ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, ದೇಶದ ಲಸಿಕೆ ತಯಾರಿಕಾ ಕಂಪನಿಗಳಿಂದ ಶೇ 75ರಷ್ಟು ಡೋಸ್‌ ಲಸಿಕೆಗಳನ್ನು ಕೇಂದ್ರ ಸರ್ಕಾರವು ಖರೀದಿಸಲಿದೆ. ರಾಜ್ಯ ಸರ್ಕಾರಗಳಿಗೆ ನಿಗದಿ ಮಾಡಲಾಗಿದ್ದ ಶೇ 25ರಷ್ಟು ಡೋಸ್‌ ಲಸಿಕೆಗಳೂ ಇದರಲ್ಲಿ ಸೇರಿವೆ. ಉಳಿದ ಶೇ 25ರಷ್ಟು ಡೋಸ್‌ ಲಸಿಕೆಗಳು ಖಾಸಗಿ ಆಸ್ಪತ್ರೆಗಳಿಗೆ ಲಭ್ಯವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.