ADVERTISEMENT

ಕೋವಿಡ್ ಔಷಧಿ ಮಾರಾಟಕ್ಕೆ ಅಮೆರಿಕದ ಗಿಲ್ಯಾಡ್ ಸೈನ್ಸಸ್ ಜತೆ ಜುಬಿಲೆಂಟ್‌‌ ಒಪ್ಪಂದ

ರಾಯಿಟರ್ಸ್
Published 13 ಮೇ 2020, 6:35 IST
Last Updated 13 ಮೇ 2020, 6:35 IST
ಎಎಫ್‌ಪಿ ಸಂಗ್ರಹ ಚಿತ್ರ
ಎಎಫ್‌ಪಿ ಸಂಗ್ರಹ ಚಿತ್ರ   

ನವದೆಹಲಿ: ಕೋವಿಡ್‌–19ಗೆ ಅಮೆರಿಕದ ಗಿಲ್ಯಾಡ್ ಸೈನ್ಸಸ್ ಇಂಕ್ ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿದ ರೆಮ್‌ಡಿಸಿವರ್ ಔಷಧಿಮಾರಾಟಕ್ಕೆ ಸಂಬಂಧಿಸಿದ ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಜುಬಿಲೆಂಟ್‌ ಲೈಫ್ ಸೈನ್ಸಸ್ ಲಿಮಿಟೆಡ್ ತಿಳಿಸಿದೆ. ಭಾರತವೂ ಸೇರಿ 127 ದೇಶಗಳಲ್ಲಿ ಔಷಧಿ ಮಾರಾಟ ಮಾಡುವ ಸಲುವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಕೋವಿಡ್–19 ಚಿಕಿತ್ಸೆಗೆ ಈ ಔಷಧಿ ಬಳಸಲು ಮೇ ಆರಂಭದಲ್ಲಿ ಅಮೆರಿಕದ ಆಹಾರ ಮತ್ತು ಔಷಧಿ ಆಡಳಿ (ಎಫ್‌ಡಿಎ) ಅನುಮತಿ ನೀಡಿತ್ತು.

ಈ ಔಷಧಿಯ ಉತ್ಪಾದನೆ ಮತ್ತು ಕಡಿಮೆ ಆದಾಯ, ಮಧ್ಯಮ ಪ್ರಮಾಣದ ಆದಾಯ ಹಾಗೂ ಕೆಲವು ಹೆಚ್ಚು ಆದಾಯ ಹೊಂದಿರುವ ದೇಶಗಳಲ್ಲಿ ಮಾರಾಟ ಮಾಡಲೂ ಜುಬಿಲೆಂಟ್‌ಗೆ ಈ ಒಪ್ಪಂದದಿಂದ‌ ಹಕ್ಕು ದೊರೆತಿದೆ.

ADVERTISEMENT

ಈ ಮಧ್ಯೆ, ‘ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ರೆಮ್‌ಡಿಸಿವರ್ ಉತ್ಪಾದನೆಗೆ ದೀರ್ಘಾವಧಿಯ ಪರವಾನಗಿಗಾಗಿ ಭಾರತ ಮತ್ತು ಪಾಕಿಸ್ತಾನದ ಔಷಧಿ ತಯಾರಕರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಉತ್ಪಾದನೆಗೆ ನೆರವಾಗುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನೂ ಒದಗಿಸಲಾಗುವುದು’ ಎಂದು ಗಿಲ್ಯಾಡ್ ಸೈನ್ಸಸ್ ಇಂಕ್ ಹೇಳಿದೆ.

ಕೋವಿಡ್‌ ಸೋಂಕಿಗೆ ಈವರೆಗೂ ಯಾವುದೇ ಅನುಮೋದಿತ ಚಿಕಿತ್ಸಾ ವಿಧಾನ ಇಲ್ಲದಿರುವುದರಿಂದ ಚಿಕಿತ್ಸೆಯಲ್ಲಿ ರೆಮ್‌ಡಿಸಿವರ್ ಬಳಕೆ ಕುರಿತ ಒಲವು ಹಚ್ಚುತ್ತಿದೆ. ಹೀಗಾಗಿ ಔಷಧಿಯ ಸೀಮಿತ ಪೂರೈಕೆ, ದರ ನಿಗದಿಯ ಬಗ್ಗೆ ಕಂಪನಿ ಗಮನಹರಿಸಿದೆ ಎನ್ನಲಾಗಿದೆ.

ನಂಜನಗೂಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಔಷಧಿ ತಯಾರಿಕಾ ಕಾರ್ಖಾನೆಯೂ ಇದೇ ಜುಬಿಲೆಂಟ್‌ ಕಂಪನಿಗೆ ಸೇರಿದ್ದಾಗಿದೆ.

ಹೆಚ್ಚಿದ ಷೇರು ಮೌಲ್ಯ: ಅಮೆರಿಕದ ಕಂಪನಿ ಜತೆ ಔಷಧಿ ಮಾರಾಟಕ್ಕೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಜುಬಿಲೆಂಟ್‌ನ ಷೇರು ಮೌಲ್ಯ ಹೆಚ್ಚಾಗಿದೆ. ಮುಂಬೈ ಷೇರುಪೇಟೆಯಲ್ಲಿ ನಿನ್ನೆಯ ವಹಿವಾಟಿನ ಕೊನೆಯಲ್ಲಿ 409.50 ಇದ್ದ ಜುಬಿಲೆಂಟ್‌ ಷೇರು ಮೌಲ್ಯ ಇಂದು 429.95 ಆಗಿದೆ. ಎನ್‌ಎಸ್‌ಇಯಲ್ಲಿ ಇಂದು ಜುಬಿಲೆಂಟ್‌ ಷೇರು ಮೌಲ್ಯ 428.55 ಆಗಿದೆ. ನಿನ್ನೆಯ ವಹಿವಾಟಿನ ಕೊನೆಯಲ್ಲಿ ಇದು 408.15 ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.