ADVERTISEMENT

ಚಿನ್ನ ಕಳ್ಳಸಾಗಣೆಗೆ ಲಾಕ್‌ಡೌನ್ ಕಡಿವಾಣ

ಏಜೆನ್ಸೀಸ್
Published 21 ಸೆಪ್ಟೆಂಬರ್ 2020, 10:44 IST
Last Updated 21 ಸೆಪ್ಟೆಂಬರ್ 2020, 10:44 IST
ಚಿನ್ನದ ಆಭರಣಗಳು (ಸಂಗ್ರಹ ಚಿತ್ರ)
ಚಿನ್ನದ ಆಭರಣಗಳು (ಸಂಗ್ರಹ ಚಿತ್ರ)   
""

ವಿಶ್ವದ ಎರಡನೇ ಅತಿದೊಡ್ಡ ಚಿನ್ನ ಬಳಕೆದಾರ ದೇಶವಾದ ಭಾರತದಲ್ಲಿ ಚಿನ್ನದ ಕಳ್ಳಸಾಗಣೆ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಕಡಿಮೆಯಾಗಿದೆ. ಕಳ್ಳಸಾಗಣೆ ಕಡಿಮೆಯಾಗಲು ಕೊರೊನಾವೈರಸ್ ಕಡಿವಾಣಕ್ಕೆಂದು ವಿಧಿಸಿದ್ದ ಲಾಕ್‌ಡೌನ್ ಮುಖ್ಯ ಕಾರಣ.

ಕಳ್ಳಸಾಗಣೆ ಮೂಲಕ ಭಾರತಕ್ಕೆ ಬರುತ್ತಿದ್ದ ಚಿನ್ನದ ಪ್ರಮಾಣವು ಏಪ್ರಿಲ್‌ ನಂತರ ತಿಂಗಳಿಗೆ ಕೇವಲ 2 ಟನ್‌ಗಳಿಗೆ, ವರ್ಷಕ್ಕೆ ಸುಮಾರು 25 ಟನ್‌ಗಳ ಪ್ರಮಾಣಕ್ಕೆ ಕುಸಿದಿದೆ ಎಂದು ಅಖಿಲ ಭಾರತ ಜೆಮ್ ಮತ್ತು ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್‌ನ ಅಧ್ಯಕ್ಷ ಎನ್.ಅನಂತ ಪದ್ಮನಾಭನ್ ಹೇಳಿದ್ದಾರೆ.

ಮಾರ್ಚ್‌ನಲ್ಲಿ ವಿಧಿಸಿದ್ದ ಲಾಕ್‌ಡೌನ್ ಸಂದರ್ಭ ಅಂತರರಾಷ್ಟ್ರೀಯ ವಿಮಾನಗಳ ಸಂಚಾರವನ್ನೂ ನಿರ್ಬಂಧಿಸಲಾಗಿತ್ತು. ಭಾರತದ ಲಾಕ್‌ಡೌನ್ ವಿಶ್ವದ ಅತಿಕಠಿಣ ಲಾಕ್‌ಡೌನ್‌ಗಳ ಪೈಕಿ ಒಂದು ಎನಿಸಿತ್ತು. ಮೂರು ತಿಂಗಳ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಪ್ರಗತಿಯೂ ಕಾಲುಭಾಗದಷ್ಟು ಕುಸಿಯಿತು. ಚಿನ್ನದ ಒಟ್ಟಾರೆ ಬೇಡಿಕೆಯ ಮೇಲೆಯೂ ಇದು ಪರಿಣಾಮ ಬೀರಿತು.

ADVERTISEMENT

ಇದೀಗ ದೇಶದಲ್ಲಿ ನಿರ್ಬಂಧವನ್ನು ಹಂತಹಂತವಾಗಿ ಸಡಿಲಿಸಲಾಗುತ್ತಿದೆ. ಆದರೆ ವಿದೇಶಗಳಿಂದ ಜನರ ಓಡಾಟಕ್ಕೆ ಇಂದಿಗೂ ಹಲವು ನಿರ್ಬಂಧಗಳಿವೆ. ಪ್ರಸ್ತುತ ಭಾರತವು ವಿಶ್ವದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಮೊದಲ ಸ್ಥಾನದಲ್ಲಿದೆ.

ಭಾರತದ ವಿಮಾನ ನಿಲ್ದಾಣಗಳಲ್ಲಿ ವಶಪಡಿಸಿಕೊಂಡ ಚಿನ್ನದ ಪ್ರಮಾಣ ಕಡಿಮೆಯಾಗಿದೆ.

'ಕಳೆದ ಆರು ತಿಂಗಳ ಅವಧಿಯಲ್ಲಿ ವಿಮಾನ ಸಂಚಾರ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಿತ್ತು. ಹೀಗಾಗಿ ಚಿನ್ನದ ಕಳ್ಳಸಾಗಣೆಯೂ ನಗಣ್ಯ ಪ್ರಮಾಣದಲ್ಲಿ ನಡೆಯಿತು. ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳಿಂದ ಭೂ ಮಾರ್ಗದಲ್ಲಿ ಮಾತ್ರ ಒಂದಿಷ್ಟು ಚಿನ್ನ ಭಾರತವನ್ನು ಪ್ರವೇಶಿಸಿದೆ' ಎಂದು ಅವರು ಹೇಳಿದರು.

ಏಪ್ರಿಲ್‌ ನಂತರ ಭಾರತದ ವಿಮಾನ ನಿಲ್ದಾಣಗಳಲ್ಲಿ ಸರಾಸರಿ ಕೇವಲ 20.6 ಕೆ.ಜಿ.ಗಳಷ್ಟೂ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನ ಪತ್ತೆಯಾಗಿದೆ ಎಂದು ಹಣಕಾಸು ಸಚಿವಾಲಯದ ದತ್ತಾಂಶಗಳನ್ನು ವಿಶ್ಲೇಷಿಸಿ ಬ್ಲೂಂಬರ್ಗ್‌ ಹೇಳಿದೆ.

ಭಾರತದಲ್ಲಿ ಚಿನ್ನಕ್ಕಿರುವ ಹೆಚ್ಚಿನ ದರ, ಶೇ 12.5ರಷ್ಟು ಆಮದು ಸುಂಕ ಮತ್ತು ಇತರ ಸ್ಥಳೀಯ ಸುಂಕಗಳು ಕಳ್ಳಸಾಗಣೆಯಿಂದ ಬಂದ ಚಿನ್ನದ ಬೆಲೆ ಅತಿಕಡಿಮೆ ಎನಿಸುವಂತೆ ಮಾಡಿದೆ. ಇದೇ ಕಾರಣಕ್ಕೆ ಆಭರಣ ತಯಾರಕರು ಶೇ 50ರಷ್ಟು ಆಮದು ಸುಂಕ ವಿನಾಯ್ತಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

'ಚಿನ್ನದ ಆಮದು ಸುಂಕವನ್ನು ಶ್ರೀಲಂಕಾ ಸಂಪೂರ್ಣ ತೆಗೆದುಹಾಕಿದೆ. ಕಳ್ಳಸಾಗಣೆ ಮಾರ್ಗಗಳ ಮೂಲಕ ಭಾರತಕ್ಕೆ ಬರುವ ಚಿನ್ನದ ಮೇಲೆ ಇದರ ಪರಿಣಾಮವೂ ಇರಲಿದೆ. ದೋಣಿಯಲ್ಲಿ ಹೊರಟರೆ ಶ್ರೀಲಂಕಾದಿಂದ ಕೇವಲ 45 ನಿಮಿಷಗಳಲ್ಲಿ ಭಾರತದ ದಕ್ಷಿಣ ತುದಿ ತಲುಪಬಹುದು. ಕಳ್ಳಸಾಗಣೆದಾರರು ಈ ವಿಚಾರದಲ್ಲಿ ಪಳಗಿದ್ದಾರೆ' ಎಂದು ಪದ್ಮನಾಭನ್ ಅಭಿಪ್ರಾಯಪಟ್ಟರು.

'ಲಾಕ್‌ಡೌನ್ ನಿರ್ಬಂಧಗಳು ಸಂಪೂರ್ಣ ತೆರವಾಗಿ, ವಿಮಾನ ಸಂಚಾರ ಮತ್ತೊಮ್ಮೆ ಆರಂಭವಾದರೆ ಚಿನ್ನದ ಕಳ್ಳಸಾಗಣೆ ಪ್ರಮಾಣವೂ ಸಹಜವಾಗಿಯೇ ಹೆಚ್ಚಾಗುತ್ತದೆ' ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.