ADVERTISEMENT

COVID-19: ಮಹಾರಾಷ್ಟ್ರದಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದಲ್ಲಿ ಲಾಕ್‌ಡೌನ್ ಘೋಷಣೆ

ಏಜೆನ್ಸೀಸ್
Published 4 ಏಪ್ರಿಲ್ 2021, 16:23 IST
Last Updated 4 ಏಪ್ರಿಲ್ 2021, 16:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾತ್ರಿ ವೇಳೆಯಲ್ಲಿ ಕರ್ಫ್ಯೂ ಮತ್ತು ವಾರಂತ್ಯದಲ್ಲಿ ಲಾಕ್‌ಡೌನ್ ಅನ್ನು ಘೋಷಣೆ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಕೊರೊನಾ ವೈರಸ್ ಅಲೆಯೆದ್ದಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಸಂಪುಟ ಸಭೆಯ ಬಳಿಕ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜವಳಿ, ಬಂದರು ಹಾಗೂ ಮೀನುಗಾರಿಕೆ ಸಚಿವ ಅಸ್ಲಾಂ ಶೇಖ್, ರಾತ್ರಿ 8ರಿಂದ 7ರ ವರೆಗೂರಾತ್ರಿ ಕರ್ಫ್ಯೂ ಹೇರಲು ನಿರ್ಧರಿಸಿರುವುದಾಗಿ ತಿಳಿಸಿದರು.

ADVERTISEMENT

ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಅಗತ್ಯ ಸೇವೆಗಳು, ವಸ್ತುಗಳ ಪೂರೈಕೆಗೆ ಅಡಚಣೆ ಇರುವುದಿಲ್ಲ.

ನೂತನ ಮಾರ್ಗಸೂಚಿಯು ಸೋಮವಾರ ರಾತ್ರಿ 8 ಗಂಟೆಯಿಂದ ಜಾರಿಗೆ ಬರಲಿದೆ. ಲೋಕಲ್ ರೈಲುಗಳು ಸೇರಿದಂತೆ ಮುಂಬೈ ಸಾರಿಗೆಯು ಎಂದಿನಂತೆ ಕಾರ್ಯಾಚರಿಸಲಿದೆ. ಅದೇ ರೀತಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮುಂದುವರಿಸುವಂತೆ ಸೂಚಿಸಲಾಗಿದೆ.

ವಾರಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಾರಂಭವಾಗಿ ಸೋಮವಾರ ಬೆಳಗ್ಗೆ 7 ಗಂಟೆಗೆ ವರೆಗೂ ಮುಂದುವರಿಯಲಿದೆ. ಈ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು.

ಏಪ್ರಿಲ್ 15ರಂದು ಪರಿಸ್ಥಿತಿ ಪುನರ್ ಅವಲೋಕನ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.

ಮಹಾರಾಷ್ಟ್ರದಲ್ಲಿ ಕಳೆದ 24 ತಾಸಿನಲ್ಲಿ 49,447 ಹೊಸ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿದ್ದು, 277 ಮಂದಿ ಮೃತಪಟ್ಟಿದ್ದಾರೆ.

ಹಗಲು ಹೊತ್ತಿನಲ್ಲೂನಿಷೇಧಾಜ್ಞೆ...
ವಾರದ ದಿನಗಳಲ್ಲಿ ಹಗಲು ಹೊತ್ತಿನಲ್ಲಿ ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಮತ್ತು ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ರಾತ್ರಿ ಕರ್ಫ್ಯೂನಿಂದ ಅಗತ್ಯ ವಸ್ತುಗಳ ಸೇವೆಗೆ ವಿನಾಯಿತಿ ಇರುತ್ತದೆ. ಸೋಮವಾರದಿಂದಲೇ ಅನ್ವಯ ಆಗುವಂತೆ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬರಲಿವೆ. ಶಾಪಿಂಗ್ ಮಾಲ್‌ಗಳು, ಬಾರ್‌ಗಳು, ರೆಸ್ಟೊರಂಟ್‌ಗಳಲ್ಲಿ ಪಾರ್ಸಲ್‌ ಒಯ್ಯಲಷ್ಟೇ ಅವಕಾಶವಿದೆ. ಸರ್ಕಾರಿ ಕಚೇರಿಗಳಲ್ಲಿ ಶೇ 50ರಷ್ಟು ಹಾಜರಿಗೆ ಅವಕಾಶವಿದೆ.

ಉದ್ಯಮಗಳು ಮತ್ತು ಉತ್ಪಾದನಾ ವಲಯ, ತರಕಾರಿ ಮಾರುಕಟ್ಟೆಗಳಲ್ಲಿ ಸಾಮಾನ್ಯ ನಿರ್ವಹಣಾ ಕ್ರಮಗಳು, ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯ. ಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿದ್ದರೆ ಮಾತ್ರ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವನ್ನು ಕಲ್ಪಿಸಲಾಗುವುದು.

ಉಳಿದತೆ, ಚಿತ್ರಮಂದಿರಗಳು, ರಂಗಶಾಲೆಗಳನ್ನು ಮುಚ್ಚಲಾಗುತ್ತದೆ. ಆದರೆ,ಗುಂಪುಗೂಡುವ ಸಾಧ್ಯತೆಗಳು ಇಲ್ಲದಿದ್ದರಷ್ಟೇ ಚಿತ್ರ ಮತ್ತು ಕಿರುತೆರೆ ಚಿತ್ರೀಕರಣ ಚಟುವಟಿಕೆಗೆ ಅನುಮತಿ ನೀಡಲಾಗುತ್ತದೆ. ಪಾರ್ಕ್‌ಗಳು, ಆಟದ ಮೈದಾನಗಳನ್ನು ಮುಚ್ಚಲಾಗುತ್ತದೆ.

ಧಾರ್ಮಿಕ ಸ್ಥಳಗಳು ತೆರೆದಿರುತ್ತವೆ. ಆದರೆ, ಮಾರ್ಗಸೂಚಿ ನಿಯಮಗಳ ಪಾಲನೆ ಕಡ್ಡಾಯ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಂದಿನಂತೆ ಕಾರ್ಯನಿರ್ವಹಿಸಲಿದೆ. ವಿಮಾ, ಮೆಡಿಕ್ಲೇಮ್‌, ವಿದ್ಯುತ್‌ ಮತ್ತು ನಾಗರಿಕ ಸೌಲಭ್ಯಗಳಿಗೆ ಸಂಬಂಧಿತ ಕಚೇರಿ ಹೊರತುಪಡಿಸಿ ಉಳಿದಂತೆ ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿಗೆ ಉತ್ತೇಜನ ನೀಡಲಾಗುವುದು ಎಂದು ಸಚಿವ ಅಸ್ಲಂ ಶೇಖ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.