ADVERTISEMENT

ಕೋವಿಡ್: ಪಂಜಾಬ್‌ನ 9 ಜಿಲ್ಲೆಗಳಲ್ಲಿ ನೈಟ್‌ ಕರ್ಫ್ಯೂ ಅವಧಿ 2 ಗಂಟೆ ವಿಸ್ತರಣೆ

ಪಿಟಿಐ
Published 18 ಮಾರ್ಚ್ 2021, 10:55 IST
Last Updated 18 ಮಾರ್ಚ್ 2021, 10:55 IST
ಕ್ಯಾಪ್ಟನ್ ಅಮರಿಂದರ್ ಸಿಂಗ್
ಕ್ಯಾಪ್ಟನ್ ಅಮರಿಂದರ್ ಸಿಂಗ್   

ಚಂಡೀಗಢ: ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್‌ನ 9 ಜಿಲ್ಲೆಗಳಲ್ಲಿ ವಿಧಿಸಿದ್ದ ರಾತ್ರಿ ಕರ್ಫ್ಯೂ ಅವಧಿಯನ್ನು 2 ಗಂಟೆ ವಿಸ್ತರಿಸಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾರ್ವಜನಿಕರು ಕೋವಿಡ್‌ ಸುರಕ್ಷತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಪರಿಸ್ಥಿತಿ ಹೀಗೆ ಮುಂದುವರಿದರೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಸರ್ಕಾರ ಜನರ ಮೇಲೆ ಕಠಿಣ ನಿಯಮಗಳನ್ನು ಸುಲಭವಾಗಿ ಏರುವುದಿಲ್ಲ. ಆದರೆ, ಜನರು ಇದಕ್ಕೆ ಆಸ್ಪದ ನೀಡಬಾರದು. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು' ಎಂದು ಮನವಿ ಮಾಡಿದ್ದಾರೆ.

ಲೂಧಿಯಾನ, ಜಲಂಧರ್, ಪಟಿಯಾಲ, ಮೊಹಾಲಿ, ಅಮೃತಸರ, ಗುರುದಾಸ್‌ಪುರ, ಹೋಶಿಯಾರ್‌ಪುರ, ಕಪುರ್ಥಾಲಾ ಮತ್ತು ರೂಪ್‌ನಗರ್‌ದಲ್ಲಿ ರಾತ್ರಿ ಕರ್ಫ್ಯೂ ಈಗ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಇರುತ್ತದೆ ಎಂದು ತಿಳಿಸಿದರು.

ಇತ್ತೀಚೆಗೆ ಈ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿದಿನ 100ಕ್ಕೂ ಹೆಚ್ಚು ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ. ಪಂಜಾಬ್‌ನಲ್ಲಿ ಬುಧವಾರ 2,039 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 35 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು.

ADVERTISEMENT

ಇದನ್ನೂ ಓದಿ... ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸಲು ಎಡಪಂಥೀಯ ಮತ ಯಾಚಿಸಿದ ಮಮತಾ

ಲುಧಿಯಾನದಲ್ಲಿ 233, ಜಲಂಧರ್‌ 277, ಪಟಿಯಾಲ 203, ಮೊಹಾಲಿ 222, ಅಮೃತಸರ 178, ಗುರುದಾಸ್‌ಪುರ 112, ಹೋಶಿಯಾರ್‌ಪುರ್‌ 191, ಕಪುರ್ಥಾಲಾ 157 ಮತ್ತು ರೂಪ್‌ನಗರ್‌ದಲ್ಲಿ 113 ಪ್ರಕರಣಗಳು ದಾಖಲಾಗಿದ್ದವು.

ಮುಂದಿನ ಎರಡು ದಿನಗಳಲ್ಲಿ ತಜ್ಞರೊಂದಿಗೆ ಚರ್ಚಿಸಿ ಸಭೆ ಸಮಾರಂಭಗಳ ಮೇಲೆ ನಿರ್ಬಂಧಗಳು ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಪ್ರಕಟಿಸಲಾಗುವುದು ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.