ADVERTISEMENT

ಆಮ್ ಆದ್ಮಿ ಶಾಸಕನಿಂದ ಆಮ್ಲಜನಕ ದಾಸ್ತಾನು: ದೆಹಲಿ ಹೈಕೋರ್ಟ್ ನೋಟಿಸ್

ಏಜೆನ್ಸೀಸ್
Published 8 ಮೇ 2021, 15:11 IST
Last Updated 8 ಮೇ 2021, 15:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ದಾಸ್ತಾನು ಇರಿಸಿದ್ದಾರೆ ಎಂಬ ಅರ್ಜಿಯನ್ನು ಪರಿಶೀಲಿಸಿರುವ ದೆಹಲಿ ಹೈಕೋರ್ಟ್ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಇಮ್ರಾನ್ ಹುಸೇನ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ವಿಭಾಗೀಯ ನ್ಯಾಯಪೀಠವು ಅರ್ಜಿ ಕುರಿತು ಉತ್ತರಿಸುವಂತೆ ಶಾಸಕರಿಗೆ ಆದೇಶಿಸಿದ್ದು, ಮುಂದಿನ ವಿಚಾರಣೆಯ ದಿನಾಂಕದಂದು ಖುದ್ದಾಗಿ ಹಾಜರಾಗುವಂತೆ ನಿರ್ದೇಶಿಸಿದೆ.

ವೇದಾಂಶ್ ಆನಂದ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ದೆಹಲಿ ಎನ್‌ಸಿಟಿಯಲ್ಲಿ ಆಮ್ಲಜನಕ ನ್ಯಾಯಯುತ ಹಾಗೂ ತಡೆರಹಿತವಾಗಿ ಪೂರೈಕೆಯಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ವಿನಂತಿ ಮಾಡಿದ್ದಾರೆ.

ADVERTISEMENT

ಆಮ್ಲಜನಕವನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವ ಶಾಸಕ ಹುಸೇನ್ ಅವರನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ವಿಶೇಷ ತನಿಖೆ ನಡೆಸುವಂತೆ ಕೋರಿದ್ದಾರೆ.

ಬಲ್ಲಿಮಾರನ್ ಕ್ಷೇತ್ರದ ಶಾಸಕರಾಗಿರುವ ಇಮ್ರಾನ್ ಹುಸೇನ್, ಸಂಪುಟ ದರ್ಜೆಯ ಹುದ್ದೆಯನ್ನು ಹೊಂದಿದ್ದು, ಆಮ್ಲಜನಕ ಕೊರತೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಬಿಕ್ಕಟ್ಟು ಸೃಷ್ಟಿಯಾದ ಸಮಯದಲ್ಲಿ ಆಮ್ಲಜನಕ ಸಿಲಿಂಡರ್ ಅನ್ನು ಅಕ್ರಮವಾಗಿ ಸಂಗ್ರಹಿಸಿದ್ದರುಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಅರ್ಜಿದಾರರು ಮೇ5ರಂದು ದೆಹಲಿ ಎಎಪಿಯ ಅಧಿಕೃತ ಪೇಸ್‌ಬುಕ್ ಪುಟದಲ್ಲಿ ಕಂಡುಬಂದ ಪೋಸ್ಟ್ ಸಹ ಉಲ್ಲೇಖಿಸಿದ್ದು, ವೈದ್ಯರ ಚೀಟಿ ತೋರಿಸಿದ ರೋಗಿಗಳಿಗೆ ಎಎಪಿ ಕಚೇರಿಯಿಂದ ಉಚಿತ ಆಮ್ಲಜನಕ ಒದಗಿಸುವುದಾಗಿ ಶಾಸಕರು ಹೇಳಿರುವುದಾಗಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.