ADVERTISEMENT

ತೆರೆಯದ ಶಾಲೆಗಳು: ಭಾರತಕ್ಕೆ ₹29.33 ಲಕ್ಷ ಕೋಟಿ ನಷ್ಟ

ಪಿಟಿಐ
Published 12 ಅಕ್ಟೋಬರ್ 2020, 11:27 IST
Last Updated 12 ಅಕ್ಟೋಬರ್ 2020, 11:27 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಕೋವಿಡ್‌–19 ಕಾರಣದಿಂದಾಗಿ ಹಲವು ತಿಂಗಳುಗಳಿಂದ ಶಾಲೆಗಳು ಮುಚ್ಚಿದ್ದು, ಮಕ್ಕಳಿಗೆ ಶಿಕ್ಷಣದಲ್ಲಾಗುವ ನಷ್ಟದ ಜೊತೆಗೆ ದೇಶದ ಭವಿಷ್ಯದ ಆದಾಯದಲ್ಲಿ ₹29.33 ಲಕ್ಷ ಕೋಟಿ ನಷ್ಟ ಸಂಭವಿಸುವ ಸಾಧ್ಯತೆ ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ಉಲ್ಲೇಖಿಸಿದೆ.

ಪ್ರಸ್ತುತ ಇರುವಂಥ ಸನ್ನಿವೇಶದಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಶಾಲೆಗಳು ತೆರೆಯದ ಕಾರಣ, ₹65.62 ಲಕ್ಷ ಕೋಟಿ ನಷ್ಟ ಸಂಭವಿಸುವ ಸಾಧ್ಯತೆ ಇದ್ದು, ಈ ಸ್ಥಿತಿ ಇನ್ನಷ್ಟು ಹದಗೆಟ್ಟಲ್ಲಿ ₹65.52 ಲಕ್ಷ ಕೋಟಿ ನಷ್ಟವಾಗಲಿದೆ. ಇದರಲ್ಲಿ ಹೆಚ್ಚಿನ ಪಾಲು ಭಾರತದಲ್ಲೇ ಆಗಿದ್ದು, ಎಲ್ಲ ರಾಷ್ಟ್ರಗಳು ತಮ್ಮ ಜಿಡಿಪಿಯಲ್ಲಿ ಬಹುಪಾಲನ್ನು ಕಳೆದುಕೊಳ್ಳಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

55 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತ?:ಪಿಡುಗಿನ ಕಾರಣ 55 ಲಕ್ಷ ಮಕ್ಕಳು ಶಾಲೆ ಬಿಡುವ ಸಾಧ್ಯತೆ ಇದ್ದು, ಇದರಿಂದ ಮುಂಬರುವ ಪೀಳಿಗೆಯ ವಿದ್ಯಾರ್ಥಿಗಳ ಮೇಲೂ ಪರಿಣಾಮ ಆಗಲಿದೆ ಎಂದು ವಿಶ್ವಬ್ಯಾಂಕ್‌ ತಿಳಿಸಿದೆ.

ADVERTISEMENT

ಈಗಾಗಲೇ ದುರ್ಬಲವಾಗಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ಆರ್ಥಿಕತೆ ಮೇಲೆ ಕೋವಿಡ್‌–19 ಮತ್ತಷ್ಟು ಪ‍ರಿಣಾಮ ಬೀರಲಿದ್ದು, ಈ ರಾಷ್ಟ್ರಗಳು ಹಿಂದೆಂದೂ ಕಾಣದಂಥ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆ ಎಂದು‘ಬೀಟನ್‌ ಆರ್‌ ಬ್ರೋಕನ್‌? ಇನ್ಫಾರ್ಮ್ಯಾಲಿಟಿ ಆ್ಯಂಡ್‌ ಕೋವಿಡ್‌–19 ಇನ್‌ ಸೌತ್‌ ಏಷ್ಯಾ’ ಹೆಸರಿನ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಕೋವಿಡ್‌ ಕಾರಣದಿಂದಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ 39.1 ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದ್ದಿದ್ದು, ಕಡ್ಡಾಯ ಶಿಕ್ಷಣವನ್ನು ನೀಡುವ ಪ್ರಯತ್ನಕ್ಕೆ ಮತ್ತಷ್ಟು ಅಡ್ಡಿ ಉಂಟಾಗಿದೆ. ಶಾಲೆ ಮುಚ್ಚಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ಹಲವು ಕ್ರಮಗಳನ್ನು ಸರ್ಕಾರಗಳು ಕೈಗೊಂಡಿದ್ದರೂ, ಇಂಥ ಶಿಕ್ಷಣ ಪ್ರಕ್ರಿಯೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಕಷ್ಟವಾಗಿದೆ’ ಎಂದು ತಿಳಿಸಲಾಗಿದೆ.

5 ತಿಂಗಳು ಮುಚ್ಚಿದ್ದ ಶಾಲೆ: ಹಲವು ರಾಷ್ಟ್ರಗಳಲ್ಲಿ ಮಾರ್ಚ್‌ನಲ್ಲೇ ಶಾಲೆಗಳು ಮುಚ್ಚಿದ್ದವು. ಐದು ತಿಂಗಳಿಗಿಂತಲೂ ಅಧಿಕ ಕಾಲ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇಷ್ಟು ಅವಧಿ ಮಕ್ಕಳು ಶಾಲೆಗೆ ಹೋಗದೇ ಇದ್ದ ಕಾರಣ ಹೊಸ ವಿಷಯಗಳನ್ನು ಕಲಿಯುವುದನ್ನು ಅವರು ಬಿಟ್ಟಿದ್ದರೆ, ಕಲಿತಿರುವ ವಿಷಯಗಳನ್ನೂ ಮರೆಯುತ್ತಿದ್ದಾರೆ ಎನ್ನಲಾಗಿದೆ.

₹3.22 ಲಕ್ಷ ನಷ್ಟ: ದಕ್ಷಿಣ ಏಷ್ಯಾ ರಾಷ್ಟ್ರದ ಮಗುವೊಂದು ಉದ್ಯೋಗಕ್ಕೆ ಇಳಿದ ಬಳಿಕ ಜೀವಿತಾವಧಿಯ ಆದಾಯದಲ್ಲಿ ₹3.22 ಲಕ್ಷ ನಷ್ಟವಾಗಲಿದೆ ಎಂದುಆಯಾ ರಾಷ್ಟ್ರಗಳ ಕಾರ್ಮಿಕರ ಆದಾಯವನ್ನು ವಿಶ್ಲೇಷಿಸಿ ವರದಿಯು ಊಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.