ADVERTISEMENT

ಕೊರೊನಾ: ಮುಂಬೈ, ಕೋಲ್ಕತ್ತ, ಜೈಪುರ, ಇಂದೋರ್ ಪರಿಸ್ಥಿತಿ ಗಂಭೀರ

ಪಿಟಿಐ
Published 20 ಏಪ್ರಿಲ್ 2020, 10:21 IST
Last Updated 20 ಏಪ್ರಿಲ್ 2020, 10:21 IST
ಲಾಕ್‌ಡೌನ್ ವೇಳೆಯೂ ಮುಂಬೈಯ ಧಾರಾವಿ ಕೊಳಗೇರಿ ಪ್ರದೇಶದಲ್ಲಿ ಜನಜಂಗುಳಿ – ಎಎಫ್‌ಪಿ ಚಿತ್ರ
ಲಾಕ್‌ಡೌನ್ ವೇಳೆಯೂ ಮುಂಬೈಯ ಧಾರಾವಿ ಕೊಳಗೇರಿ ಪ್ರದೇಶದಲ್ಲಿ ಜನಜಂಗುಳಿ – ಎಎಫ್‌ಪಿ ಚಿತ್ರ   

ನವದೆಹಲಿ: ಮುಂಬೈ, ಪುಣೆ, ಇಂದೋರ್, ಜೈಪುರ, ಕೋಲ್ಕತ್ತ ಮತ್ತು ಪಶ್ಚಿಮ ಬಂಗಾಳದ ಇತರ ಕೆಲವು ಪ್ರದೇಶಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವುದು, ಅಂತರ ಕಾಯ್ದುಕೊಳ್ಳದಿರುವುದು, ನಗರ ಪ್ರದೇಶಗಳಲ್ಲಿ ವಾಹನ ಓಡಾಟ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇವುಗಳನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು ಎಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಸೋಮವಾರ 17,265ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 543ಕ್ಕೆ ಏರಿಕೆಯಾಗಿದೆ.

ಮಧ್ಯಪ್ರದೇಶದ ಇಂದೋರ್, ಮಹಾರಾಷ್ಟ್ರದ ಮುಂಬೈ ಮತ್ತು ಪುಣೆ, ರಾಜಸ್ಥಾನದ ಜೈಪುರ, ಪಶ್ಚಿಮ ಬಂಗಾಳದ ಕೋಲ್ಕತ್ತ, ಹೌರಾ, ಪೂರ್ವ ಮೇದಿನಿಪುರ, ನಾರ್ತ್ 24 ಪರಗಣ, ಡಾರ್ಜೆಲಿಂಗ್, ಕಾಲಿಮ್‌ಪೋಂಗ್, ಜಲ್‌ಪೈಗುರಿಗಳಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ವರದಿಯಾಗಿದೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯಕಾರಿ. ನಿಯಮ ಉಲ್ಲಂಘನೆಯಿಂದ ಕೋವಿಡ್ ಹರಡುವಿಕೆ ಹೆಚ್ಚುವ ಅಪಾಯವಿದೆ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.

ಪರಿಸ್ಥಿತಿ ಗಂಭೀರವಾಗಿರುವ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸಲು ಮತ್ತು ರಾಜ್ಯ ಸರ್ಕಾರಗಳಿಗೆ ಅಗತ್ಯ ನಿರ್ದೇಶನ ನೀಡಲು ಅಂತರ ಸಚಿವಾಲಯ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಸರ್ಕಾರಕ್ಕೆ ವರದಿ ಸಲ್ಲಿಸಲಿವೆ ಎಂದೂ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.