ADVERTISEMENT

ಭೂತಾನ್‌ಗೆ ಉಡುಗೊರೆಯಾಗಿ ಕೋವಿಡ್-19 ಲಸಿಕೆ ರವಾನಿಸಿದ ಭಾರತ

ಏಜೆನ್ಸೀಸ್
Published 20 ಜನವರಿ 2021, 5:33 IST
Last Updated 20 ಜನವರಿ 2021, 5:33 IST
ಭೂತಾನ್ ಪ್ರಧಾನಿ ಲೊಟೆ ಶೆರಿಂಗ್ ಜೊತೆ ಭಾರತ ಪ್ರಧಾನಿ ನರೇಂದ್ರ ಮೋದಿ
ಭೂತಾನ್ ಪ್ರಧಾನಿ ಲೊಟೆ ಶೆರಿಂಗ್ ಜೊತೆ ಭಾರತ ಪ್ರಧಾನಿ ನರೇಂದ್ರ ಮೋದಿ   

ಮುಂಬೈ: ನೆರೆಯ ಭೂತಾನ್ ರಾಷ್ಟ್ರಕ್ಕೆ ಉಡುಗೊರೆಯಾಗಿ ಭಾರತ ಕೋವಿಡ್-19 ಲಸಿಕೆಯನ್ನು ರವಾನಿಸಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ಮುಂಜಾನೆ 1.5 ಲಕ್ಷ ಕೋವಿಡ್-19 ಲಸಿಕೆಯ 'ಕೋವಿಶೀಲ್ಡ್‌' ಡೋಸೇಜ್‌ಗಳನ್ನು ರವಾನಿಸಲಾಯಿತು.

ಕೋವಿಡ್-19 ಲಸಿಕೆ ಉಡುಗೊರೆಯಾಗಿ ಪಡೆದ ಮೊದಲ ರಾಷ್ಟ್ರವೆಂಬ ಗೌರವಕ್ಕೆ ಭೂತಾನ್ ಪಾತ್ರವಾಗಿದೆ. ಭೂತಾನ್ ಜೊತೆಗೆ ಅನ್ಯೋನ್ಯ ಬಾಂಧವ್ಯ ಕಾಪಾಡಿರುವ ಭಾರತ, ಕೋವಿಡ್-19 ನಿರ್ಬಂಧಗಳ ಹೊರತಾಗಿಯೂ ನಿರಂತರ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಬದ್ಧತೆಯನ್ನು ಪ್ರದರ್ಶಿಸಿದೆ.

ಕೋವಿಡ್-19 ಕಠಿಣ ಕಾಲಘಟ್ಟದಲ್ಲೂ ಭೂತಾನ್‌ಗೆ 2.8 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಪಿಪಿಇ ಕಿಟ್, ಎನ್‌95 ಮಾಸ್ಕ್ ಸೇರಿದಂತೆ ಅಗತ್ಯ ಔಷಧಿ ಹಾಗೂ ವೈದ್ಯಕೀಯ ಸಾಮಾಗ್ರಿಗಳನ್ನು ಭಾರತ ಒದಗಿಸಿದೆ.

ADVERTISEMENT

ಭಾರತದಲ್ಲಿ ಸಿಲುಕಿರುವ 2,000ಕ್ಕೂ ಹೆಚ್ಚು ಭೂತಾನ್ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಾಸ್ ಕಳುಹಿಸಲು ಸರ್ಕಾರ ವ್ಯವಸ್ಥೆ ಮಾಡಿಕೊಟ್ಟಿತ್ತು. ಹಾಗೆಯೇ 'ವಂದೇ ಭಾರತ್' ಮಿಷನ್ ಮೂಲಕ ವಿದೇಶದಲ್ಲಿ ಸಿಲುಕಿದ 14ರಷ್ಟು ಭೂತಾನ್ ಪ್ರಜೆಗಳನ್ನು ಸ್ವದೇಶಕ್ಕೆ ಮರಳಿಸಲು ಸಹಾಯ ಮಾಡಿತ್ತು.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ. ಈ ಮೊದಲು ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೂತಾನ್ ಪ್ರಧಾನಿ ಲೊಟೆ ಶೆರಿಂಗ್ ಅಭಿನಂದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.