ADVERTISEMENT

ಮನೆ–ಮನೆ ಬಾಗಿಲಿಗೆ ಲಸಿಕೆ: ಮೋದಿ ಪ್ರತಿಪಾದನೆ

ಕೋವಿಡ್‌–19 ಲಸಿಕೆ ಅಭಿಯಾನ ಚುರುಕುಗೊಳಿಸಲು ನವೀನ ಕ್ರಮಕ್ಕೆ ಸಲಹೆ

ಪಿಟಿಐ
Published 3 ನವೆಂಬರ್ 2021, 22:00 IST
Last Updated 3 ನವೆಂಬರ್ 2021, 22:00 IST
ಕೋವ್ಯಾಕ್ಸಿನ್‌
ಕೋವ್ಯಾಕ್ಸಿನ್‌   

ನವದೆಹಲಿ: ಪ್ರಸ್ತುತ ಮನೆ ಮನೆಗೂ ತೆರಳಿ ಕೋವಿಡ್ ಲಸಿಕೆ ನೀಡುವ ಅಭಿಯಾನದ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ದೇಶದಲ್ಲಿ ಲಸಿಕೆ ನೀಡಿಕೆಯಲ್ಲಿ ಹಿಂದೆ ಉಳಿದಿರುವ 45 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಬುಧವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಿಸಲು ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಇಲ್ಲಿಯವರೆಗೂ ನೀವು ಲಸಿಕಾ ಕೇಂದ್ರದ ಬಳಿಗೆ ಜನರನ್ನು ಕರೆತರುತ್ತಿದ್ದಿರಿ. ಈಗ ನೀವೇ ಪ್ರತಿ ಮನೆಗೂ ತೆರಳಿ ಲಸಿಕೆ ನೀಡುವ ಮೂಲಕ ‘ಹರ್ ಘರ್‌ ದಸ್ತಕ್‌ ಆಂದೋಲನ‘ದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದರು.

ADVERTISEMENT

ಇತ್ತೀಚೆಗೆ ವ್ಯಾಟಿಕನ್ ಸಿಟಿಯಲ್ಲಿ ಪೋಪ್‌ ಫ್ರಾನ್ಸಿಸ್‌ ಅವರ ಭೇಟಿಯನ್ನು ಉಲ್ಲೇಖಿಸಿ ಮಾತನಾಡಿದ ಮೋದಿ, ಲಸಿಕೆ ಅಗತ್ಯ ಕುರಿತು ಧಾರ್ಮಿಕ ನಾಯಕರ ಮೂಲಕವೂ ಜನರಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಒಂದೂ ಲಸಿಕೆಯನ್ನು ತೆಗೆದುಕೊಳ್ಳದವರಿಗೆ ಮೊದಲ ಆದ್ಯತೆ ನೀಡಬೇಕು. ಅದರೊಂದಿಗೆ, ಎರಡನೇ ಲಸಿಕೆ ಪಡೆಯಬೇಕಿರುವ ಜನರ ಕಡೆಗೂ ಅಷ್ಟೇ ಗಮನ ನೀಡಬೇಕು ಎಂದು ಅವರು ಹೇಳಿದರು.

ಜಿ20 ಹಾಗೂ ಸಿಒಪಿ26 ಶೃಂಗಸಭೆಗಳಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದಂತೆಯೇ, ಪ್ರಧಾನಿ ಈ ಸಭೆ ನಡೆಸಿದ್ದಾರೆ.

ಕೋವ್ಯಾಕ್ಸಿನ್‌ ತುರ್ತುಬಳಕೆಗೆ ಸಮ್ಮತಿ

ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್‌ ಲಸಿಕೆ ತುರ್ತುಬಳಕೆಗೆ ಅನುಮತಿ ನೀಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಬುಧವಾರ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸ್ವತಂತ್ರ ತಾಂತ್ರಿಕ ಸಲಹಾ ಸಮಿತಿಯು (ಟಿಎಜಿ) ಕೋವ್ಯಾಕ್ಸಿನ್ ಅನ್ನು ತುರ್ತುಬಳಕೆಯ ಪಟ್ಟಿಗೆ ಶಿಫಾರಸು ಮಾಡಿದ ಬೆನ್ನಲ್ಲೇ ಅನುಮತಿ ನೀಡಲಾಗಿದೆ.

12 ತಿಂಗಳಿಗೆ ವಿಸ್ತರಣೆ

ಕೋವ್ಯಾಕ್ಸಿನ್‌ ಬಳಕೆಯ ಅವಧಿಯನ್ನು ತಯಾರಿಕೆಯ ದಿನಾಂಕದಿಂದ 12 ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಔಷಧಿ ನಿಯಂತ್ರಣ ಮಂಡಳಿ (ಸಿಡಿಎಸ್‌ಸಿಒ) ಅನುಮೋದನೆ ನೀಡಿದೆ ಎಂದುಭಾರತ್ ಬಯೋಟೆಕ್ ಕಂಪನಿಯು ಟ್ವೀಟ್‌ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.