ADVERTISEMENT

ವ್ಯಾಪಕ ಪರೀಕ್ಷೆ ನಡೆಸದೇ ಕೋವಿಡ್‌ ಜಯಿಸುವುದು ಅಸಾಧ್ಯ: ಮನಮೋಹನ್‌ ಸಿಂಗ್

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 10:53 IST
Last Updated 26 ಏಪ್ರಿಲ್ 2020, 10:53 IST
   

ನವದೆಹಲಿ: ವ್ಯಾಪಕಪರೀಕ್ಷಾ ಸೌಲಭ್ಯಗಳಿಲ್ಲದೇ ಭಾರತವು ಕೋವಿಡ್‌-19 ಸವಾಲುಗಳನ್ನು ಜಯಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಪರೀಕ್ಷಿಸುವಿಕೆ ಮತ್ತು ಪತ್ತೆ ಹಚ್ಚುವಿಕೆ ಪ್ರಮುಖ ಅಸ್ತ್ರಗಳಾಗಿವೆ ಎಂದು ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಮನಮೋಹನ್‌ ಸಿಂಗ್‌ ತಿಳಿಸಿದ್ದಾರೆ.

'ಪರೀಕ್ಷಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳಿವೆ. ಪರೀಕ್ಷೆಗಳು ವ್ಯಾಪಕವಾಗಿ ನಡೆಯದಿದ್ದರೆ ಕೋವಿಡ್‌-19 ಅನ್ನು ಜಯಿಸಲು ಸಾಧ್ಯವಿಲ್ಲ' ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ADVERTISEMENT

ಕೊರೊನಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಲವು ನಾಯಕರು ವಿಡಿಯೊದಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರ ಸಮಸ್ಯೆಯ ಬಗ್ಗೆ ಮಾತನಾಡಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, 'ವಲಸೆ ಕಾರ್ಮಿಕರ ರಕ್ಷಣೆಗಾಗಿ ಪಕ್ಷವು ಯೋಜನೆಯನ್ನು ರೂಪಿಸಲಿದೆ' ಎಂದಿದ್ದಾರೆ.

'ಪರೀಕ್ಷಿಸುವುದು ಮತ್ತು ಪತ್ತೆ ಹಚ್ಚುವುದು ಕೋವಿಡ್‌-19 ವಿರುದ್ಧದ ಹೋರಾಟದ ಅಸ್ತ್ರಗಳು. ವಲಸೆ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಮಾನವತಾವಾದ, ರಕ್ಷಣೆ ಮತ್ತು ಆರ್ಥಿಕ ಭದ್ರತೆಗಳನ್ನು ಅನುಸರಿಸಬೇಕು. ನಮ್ಮ ಮುಂದಿರುವ ದಾರಿ ಇದೊಂದೇ' ಎಂದು ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷವು ವಿಡಿಯೊ ಟ್ವೀಟ್‌ ಮಾಡಿದೆ.

ವಿಡಿಯೊದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಮುಖಂಡರಾದ ಕೆ.ಸಿ.ವೇಣುಗೋಪಾಲ್‌, ಜಯರಾಮ್‌ ರಮೇಶ್‌ ಮತ್ತು ಮನೀಷ್‌ ತಿವಾರಿ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.