ADVERTISEMENT

ಕೋವಿಡ್‌ ಲಸಿಕೆ ಅಭಿಯಾನ ಕುರಿತ ಸುಳ್ಳುಗಳಿಗೆ ಮೋದಿ ಸರ್ಕಾರ ಪ್ರತ್ಯುತ್ತರ

ರಾಜ್ಯ ಸರ್ಕಾರಗಳೇ ಹೊಣೆ: ಜಗತ್ತಿನಾದ್ಯಂತ ಲಸಿಕೆ ಕೊರತೆ

​ಪ್ರಜಾವಾಣಿ ವಾರ್ತೆ
Published 28 ಮೇ 2021, 7:43 IST
Last Updated 28 ಮೇ 2021, 7:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ದೇಶದಲ್ಲಿನ ಕೋವಿಡ್‌–19 ಲಸಿಕೆ ಅಭಿಯಾನದ ಕುರಿತು ಅರ್ಧ ಸತ್ಯ ಮತ್ತು ಸುಳ್ಳಿನ ಕಂತೆಗಳನ್ನು ಹಬ್ಬಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಲಸಿಕೆ ಅಭಿಯಾನ ಸಮರ್ಪಕವಾಗಿ ನಡೆಯುತ್ತಿಲ್ಲ. ನಿಧಾನಗತಿಯಲ್ಲಿ ಲಸಿಕೆ ನೀಡಲಾಗುತ್ತಿದೆ ಮತ್ತು ಲಸಿಕೆ ಕೊರತೆ ಇದೆ. ಇದರಿಂದಾಗಿ ಹಲವು ಲಸಿಕೆ ಕೇಂದ್ರಗಳನ್ನು ಮುಚ್ಚಲಾಗಿದೆ ಎನ್ನುವ ಟೀಕೆಗಳಿಗೆ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ.

‘ಲಸಿಕೆ ಅಭಿಯಾನಕ್ಕೆ ರಾಜ್ಯ ಸರ್ಕಾರಗಳೇ ಹೊಣೆಯಾಗಿವೆ. ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನಿಧಾನಗತಿಯಲ್ಲಿ ಲಸಿಕೆ ಹಾಕಿದ ರಾಜ್ಯ ಸರ್ಕಾರಗಳು, ಲಸಿಕೆ ಪ್ರಕ್ರಿಯೆಯನ್ನು ಮುಕ್ತಗೊಳಿಸಬೇಕು ಮತ್ತು ವಿಕೇಂದ್ರೀಕರಣಗೊಳಿಸಬೇಕು ಎಂದು ಒತ್ತಾಯಿಸಿದವು’ ಎಂದು ಕೋವಿಡ್‌–19 ಲಸಿಕಾ ಅಭಿಯಾನ ಕುರಿತ ರಾಷ್ಟ್ರೀಯ ತಜ್ಞರ ತಂಡದ ಅಧ್ಯಕ್ಷ ಹಾಗೂ ನೀತಿ ಆಯೋಗದ ಸದಸ್ಯ ವಿನೋದ್‌ ಪೌಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಾಲ್ಕು ತಿಂಗಳ ಬಳಿಕ ಕೇವಲ 67 ಲಕ್ಷ ಆರೋಗ್ಯ ಕಾರ್ಯಕರ್ತರು ಮತ್ತು 84 ಲಕ್ಷ ಮುಂಚೂಣಿ ಸಿಬ್ಬಂದಿ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

‘ರಾಜ್ಯ ಸರ್ಕಾರಗಳಿಗೆ ದೇಶದಲ್ಲಿ ಲಸಿಕೆ ಉತ್ಪಾದನೆಯ ಸಾಮರ್ಥ್ಯದ ಮಾಹಿತಿ ತಿಳಿದಿತ್ತು. ವಿದೇಶದಿಂದ ಲಸಿಕೆ ಆಮದು ಮಾಡಿಕೊಳ್ಳಲು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ಸಹ ರಾಜ್ಯಗಳಿಗೆ ಗೊತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಆರೋಗ್ಯವು ರಾಜ್ಯದ ವಿಷಯವಾಗಿದೆ. ನಿರಂತರ ಮನವಿ ಮಾಡಿದ್ದರಿಂದ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಲು ಲಸಿಕಾ ನೀತಿಯನ್ನು ಮುಕ್ತಗೊಳಿಸಲಾಯಿತು. ಜಾಗತಿಕ ಟೆಂಡರ್‌ಗಳಿಂದ ಯಾವುದೇ ಫಲಿತಾಂಶ ದೊರೆತಿಲ್ಲ. ಜಗತ್ತಿನಾದ್ಯಂತ ಲಸಿಕೆ ಕೊರತೆ ಇದೆ. ಕಡಿಮೆ ಅವಧಿಯಲ್ಲಿ ಲಸಿಕೆ ಸಂಗ್ರಹಿಸಲು ಸಾಧ್ಯವಿಲ್ಲ’ ಎಂದು ಪೌಲ್‌ ವಿವರಿಸಿದ್ದಾರೆ.

ಕೋವಿಡ್‌–19ಗೆ ಐದು ಕೋಟಿ ಡೋಸ್‌ಗಳನ್ನು ಪೂರೈಸುವುದಾಗಿ ಫೈಜರ್‌ ಕಂಪನಿ ಸಲ್ಲಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಫೈಜರ್‌, ಮಾಡರ್ನಾ ಹಾಗೂ ಜಾನ್ಸನ್‌ ಮತ್ತು ಜಾನ್ಸನ್‌ ಕಂಪನಿಗಳ ಜತೆ ಕೇಂದ್ರ ಸರ್ಕಾರ 2020ರ ಜೂನ್‌ನಿಂದಲೇ ಸಂಪರ್ಕದಲ್ಲಿದೆ. ಆದರೆ, ಈ ಕಂಪನಿಗಳಿಗೆ ತಮ್ಮದೇ ಆದ ಆದ್ಯತೆಗಳಿವೆ ಮತ್ತು ಒತ್ತಡಗಳಿವೆ ಎಂದು ತಿಳಿಸಿದ್ದಾರೆ.

ಫೈಜರ್‌ ಕಂಪನಿ ಈಗ ಲಸಿಕೆ ಪೂರೈಸಲು ಆಸಕ್ತಿ ತೋರಿಸಿರುವುದರಿಂದ ಸರ್ಕಾರವು ಪರಿಶೀಲನೆ ನಡೆಸುತ್ತಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ತಲಾ ಒಂದು ಕೋಟಿ ಡೋಸ್‌ಗಳು, ಸೆಪ್ಟೆಂಬರ್‌ನಲ್ಲಿ ಎರಡು ಕೋಟಿ, ಅಕ್ಟೋಬರ್‌ನಲ್ಲಿ ಒಂದು ಕೋಟಿ ಡೋಸ್‌ಗಳನ್ನು ಪೂರೈಸಲಾಗುವುದು ಎಂದು ಫೈಜರ್‌ ತಿಳಿಸಿದೆ.

ಲಸಿಕೆ ಪೂರೈಕೆ ವಿಷಯದಲ್ಲಿ ಕೇವಲ ಕೇಂದ್ರ ಸರ್ಕಾರದ ಜತೆ ಮಾತ್ರ ವ್ಯವಹಾರ ನಡೆಸಲಾಗುವುದು. ರಾಜ್ಯ ಸರ್ಕಾರಗಳು ಅಥವಾ ಖಾಸಗಿ ಆಸ್ಪತ್ರೆಗಳ ಜತೆ ವ್ಯವಹಾರ ನಡೆಸುವುದಿಲ್ಲ ಎಂದು ಫೈಜರ್‌ ಕಂಪನಿ ಸ್ಪಷ್ಟವಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.