ADVERTISEMENT

ಕೋವಿಡ್ ಬಳಿಕ ಮಕ್ಕಳ ನಾಪತ್ತೆ ಹೆಚ್ಚಳ: ಎನ್‌ಜಿಒಗಳ ಆತಂಕ

ಪಿಟಿಐ
Published 28 ಮೇ 2022, 19:31 IST
Last Updated 28 ಮೇ 2022, 19:31 IST
   

ನವದೆಹಲಿ: ಕೋವಿಡ್‌ ಪಿಡುಗಿನ ಸಾಮಾಜಿಕ ಪ್ರಭಾವದಿಂದಾಗಿ ಎರಡು ವರ್ಷಗಳಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗಿದೆ ಎಂದು ಮಕ್ಕಳ ಹಕ್ಕುಗಳ ಎನ್‌ಜಿಒಗಳು ಆತಂಕ ವ್ಯಕ್ತಪಡಿಸಿವೆ.

ತುರ್ತಾಗಿ ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ಬಲಪಡಿಸಬೇಕಿದೆ. ಅಲ್ಲದೆ ಪೋಷಕರನ್ನು ಈ ನಿಟ್ಟಿನಲ್ಲಿ ಜಾಗೃತಗೊಳಿಸುವುದರ ಜತೆಗೆ ತರಬೇತಿಯನ್ನೂ ನೀಡಬೇಕು. ಹೀಗಾಗಿ ಈ ಕಾರ್ಯಕ್ಕೆ ಸರ್ಕಾರ ಬಜೆಟ್‌ ಹಂಚಿಕೆ ಮಾಡಬೇಕು ಎಂದು ಎನ್‌ಜಿಒಗಳು ಆಗ್ರಹಿಸಿವೆ.

ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊದ (ಎನ್‌ಸಿಆರ್‌ಬಿ) ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, 2020ರಲ್ಲಿ ಭಾರತದಲ್ಲಿ 59,262 ಮಕ್ಕಳು ಕಾಣೆಯಾಗಿದ್ದಾರೆ. ಹಿಂದಿನ ವರ್ಷಗಳಲ್ಲಿ ನಾಪತ್ತೆಯಾಗಿದ್ದ 48,972 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಅಂದರೆ ಒಟ್ಟಾರೆ ಕಾಣೆಯಾದ ಮಕ್ಕಳ ಸಂಖ್ಯೆ 1,08,234ಕ್ಕೆ ಏರಿದೆ. 2008ರಿಂದ 2020ರವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಮಕ್ಕಳು ಕಾಣೆಯಾದ ಪ್ರಕರಣಗಳ ಸಂಖ್ಯೆ 13 ಪಟ್ಟು ಹೆಚ್ಚಳವಾಗಿದೆ. 2008ರಲ್ಲಿ ಮಕ್ಕಳು ಕಾಣೆಯಾದ7,650 ಪ್ರಕರಣಗಳು ವರದಿಯಾಗಿತ್ತು.

ADVERTISEMENT

ಕೈಲಾಶ್ ಸತ್ಯಾರ್ಥಿ ಫೌಂಡೇಶನ್‌ನ ಸಹೋದರ ಸಂಸ್ಥೆಯಾದಬಚ್ಪನ್‌ ಬಚಾವೋ ಆಂದೋಲನ (ಬಿಬಿಎ) ದೇಶದಾದ್ಯಂತ ಸುಮಾರು 12,000 ಮಕ್ಕಳನ್ನು ರಕ್ಷಿಸಿದೆ ಎಂದು ಅದರ ಕಾರ್ಯನಿರ್ವಾಹಕ ನಿರ್ದೇಶಕ ಧನಂಜಯ್ ಟಿಂಗಾಲ್ ಅವರು ಹೇಳಿದ್ದಾರೆ.

‘ಕೋವಿಡ್‌ ಪಿಡುಗಿನ ಬಳಿಕ ಮಕ್ಕಳ ಕಳ್ಳಸಾಗಣೆ ಹಲವು ಪಟ್ಟು ಹೆಚ್ಚಾಗಿದೆ ಎಂಬುದನ್ನು ಇವು ತೋರಿಸುತ್ತವೆ’ ಎಂದು ಅವರು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.